More

    ಕೆಂಪು ಕೋಟೆ ಹಿಂಸಾಚಾರದ ಪ್ರಮುಖ ಆರೋಪಿ ನಟ ದೀಪ್​ ಸಿಧು ಕಾರು ಅಪಘಾತದಲ್ಲಿ ದುರ್ಮರಣ

    ನವದೆಹಲಿ: 2021ರ ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ನಡೆದ ರೈತರ ಹಿಂಸಾಚಾರ ಪ್ರಕರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪ್ರಮುಖ ಆರೋಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಪಂಜಾಬಿ ನಟ ದೀಪ್ ಸಿಧು ಮಂಗಳವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ದೆಹಲಿಯನ್ನು ಬೈಪಾಸ್ ಮಾಡುವ ಕುಂಡ್ಲಿ-ಮನೇಸರ್​-ಪಲವಲ್​ (ಕೆಎಂಪಿ) ಹೆದ್ದಾರಿಯನಲ್ಲಿ ಅಪಘಾತ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಲಭ್ಯವಾಗಿದ್ದು, ಅದರಲ್ಲಿ ಮಹೀಂದ್ರಾ ಸ್ಕಾರ್ಪಿಯೋ ವಾಹನ ಟ್ರೈಲರ್​ ಟ್ರಕ್​ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಎಸ್​ಯುವಿ ವಾಹನದ ಚಾಲಕನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿರುವುದು ಕಂಡುಬಂದಿದೆ.

    ಸಿಧು ಅವರು ದೆಹಲಿಯಿಂದ ಪಂಜಾಬ್​ನ ಭಟಿಂಡಾಗೆ ತೆರಳುತ್ತಿದ್ದರು. ಮಂಗಳವಾರ (ಫೆ. 15) ರಾತ್ರಿ 9.30ರ ಸುಮಾರಿಗೆ ಸಿಧು ಅವರಿದ್ದ ಎಸ್​ಯುವಿ ಕಾರು ಟ್ರಕ್​ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ತಕ್ಷಣ ಸಿಧು ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಸಾವಿಗೀಡಾಗಿರುವುದಾಗಿ ವೈದ್ಯರು ಘೋಷಣೆ ಮಾಡಿದರು.

    ಸಿಧು ಸಾವಿಗೆ ಪಂಜಾಬ್​ ಮುಖ್ಯಮಂತ್ರಿ ಚರಂಜಿತ್​ ಚನ್ನಿ ಅವರು ಸಂತಾಪ ಸೂಚಿಸಿದ್ದಾರೆ. ಖ್ಯಾತ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರ ದುರದೃಷ್ಟಕರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖತಪ್ತ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ ಎಂದು ಪಂಜಾಬ್​ ಸಿಎಂ ಟ್ವೀಟ್​ ಮಾಡಿದ್ದಾರೆ.

    ಕೆಂಪುಕೋಟೆಯಲ್ಲಿ ರೈತರ ಹಿಂಸಾಚಾರದ ಬಳಿಕ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದ. ದೀಪ್​ ಸಿಧು ಮತ್ತು ಇತರೆ ಮೂವರು ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಣೆ ಮಾಡಿದ್ದರು. ಇದಾದ ಬಳಿಕ ಸಿಧುವನ್ನು ದೆಹಲಿ ಪೊಲೀಸರು 2021ರ ಫೆ. 9ರಂದು ಬಂಧಿಸಿದ್ದರು.

    ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟುಮಾಡುವುದನ್ನು ತಡೆಯುವ ಕಾಯ್ದೆ ಸೇರಿದಂತೆ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳು ಮತ್ತು ಉಳಿದಿರುವ ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ, ಕೊಲೆ ಯತ್ನ ಪ್ರಕರಣ (307), ಸೆಕ್ಷನ್ 152 ರ ಅಡಿಯಲ್ಲಿ ದಂಗೆಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾಗ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಆರೋಪಗಳ ಅಡಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೀಪ್​ ಸಿಧು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

    ಗಲಭೆಗೆ ಕುಮ್ಮಕ್ಕು ನೀಡುವ ಆರೋಪದ ಕುರಿತು ಬಹಿರಂಗಗೊಳ್ಳುತ್ತಿದ್ದಂತೆಯೇ ನಟ ದೀಪ್‌ ಸಿಧು ನಾಪತ್ತೆಯಾಗಿದ್ದರು. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸದಸ್ಯರಾಗಿರುವ ದೀಪ್ ಸಿಧು ಅವರು ಪ್ರಚೋದಿತ ಭಾಷಣ ಮಾಡಿ, ಗುಂಪನ್ನು ಕೆಂಪು ಕೋಟೆಗೆ ಕರೆದೊಯ್ದರು ಎಂದು ರೈತ ಸಂಘಟನಗೆಳು ಆರೋಪಿಸಿದ್ದವು.

    2021ರ ಜ. 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 86 ಮಂದಿ ಗಾಯಗೊಂಡಿದ್ದರು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್​ ರ್ಯಾಲಿಗೆ ನಾಲ್ಕು ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು. ಅದಕ್ಕಾಗಿ ಕೆಲವೊಂದು ಷರತ್ತುಗಳನ್ನೂ ವಿಧಿಸಲಾಗಿತ್ತು. ಎಲ್ಲಾ ಷರತ್ತುಗಳನ್ನು ರೈತರು ಒಪ್ಪಿಕೊಂಡಿದ್ದರು. ಆದರೆ, ಉದ್ದೇಶಪೂರ್ವಕವಾಗಿಯೇ ಹಿಂಸಾಚಾರವು ನಡೆದಿತ್ತು. ಈ ವೇಳೆ ಕಂಡಕಂಡಲ್ಲಿ ಪೊಲೀಸರ ಮೇಲೂ ಹಲ್ಲೆ ನಡೆದಿತ್ತು. ಹಿಂಸಾಚಾರದ ಹಿಂದೆ ದೀಪ್​ ಸಿಧು ಕೈವಾಡ ಹಿನ್ನೆಲೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿತ್ತು. ನಂತರ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೀಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    1 ಜಿಲ್ಲೆ 1 ಉತ್ಪಾದನೆಗಿಲ್ಲ ಸ್ಪಂದನೆ!; ಸಾಲ ಮಂಜೂರು ವಿಳಂಬ, ಯೋಜನೆಗೆ ಅನ್ನದಾತರ ನಿರಾಸಕ್ತಿ

    ಕಂಗನಾ ರಣಾವತ್ ಕಣ್ಣು ಆಲಿಯಾ ಮೇಲೆ…

    ಟಾರ್ಗೆಟ್ ಯೂತ್: ಸೋಷಿಯಲ್ ಮೀಡಿಯಾ, ರಾಜಕೀಯ ಪಕ್ಷಗಳ ಅಸ್ತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts