More

    ಸದ್ದಿಲ್ಲದೆ ಕೊಲ್ಲುವ ಮಧುಮೇಹ

    ರಾಮನಗರ: ಜೀವನಶೈಲಿ ಬದಲಾದರೆ ಮಧುಮೇಹವನ್ನು ತಡೆಗಟ್ಟಬಹುದು ಎಂದು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಎಸ್. ಶಶಿಧರ್ ತಿಳಿಸಿದರು. ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಗರದ ಶಾಂತಲಾ ಕಲಾ ಕೇಂದ್ರದ ದರ್ಪಣ ಸಭಾಂಗಣದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ಮಧುಮೇಹ ಆರೈಕೆ ಮತ್ತು ನಿರ್ವಹಣೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸದ್ದಿಲ್ಲದೆ ಮನುಷ್ಯನನ್ನು ಕೊಲ್ಲುವ ಕಾಯಿಲೆ ಮಧುಮೇಹ. ಇದು ಜೀವ ಹಾಗೂ ಜೀವನ ಎಡರನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಪ್ರಸ್ತುತ ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶ ದಲ್ಲೂ ಈ ಕಾಯಿಲೆ ಆವರಿಸಿದೆ. ಮಕ್ಕಳಲ್ಲೂ ಕಂಡುಬರುತ್ತಿರುವುದು ಆತಂಕದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

    ಮಧುಮೇಹ ಕಾಯಿಲೆಗೆ ತೆಗೆದುಕೊಳ್ಳುವ ಔಷಧಗಳನ್ನು ಜೀವನ ಪರ್ಯಂತ ತೆಗೆದುಕೊಳ್ಳಬೇಕಿರುತ್ತದೆ. ಆದ್ದರಿಂದ ಯಾವುದೇ ಕಾರಣದಿಂದಲೂ ಮಾತ್ರೆಗಳ ಸೇವನೆ ನಿಲ್ಲಿಸಬಾರದು ಎಂದು ಹೇಳಿದರು.

    ದೇಹದಲ್ಲಿ ಗ್ಲುಕೋಸ್ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ ಮಧುಮೇಹ. ಬೇರೆ ರಾಷ್ಟ್ರಗಳಿಗಿಂತ ಭಾರತದಲ್ಲಿ ಈ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮಕ್ಕಳಿಗೆ ಉತ್ತಮ ಜೀವನ ಶೈಲಿಯನ್ನು ಹೇಳಿಕೊಡಲು ಪಾಲಕರು ಮುಂದಾಗಬೇಕು. ಇದರಿಂದ ಸಮಾಜದ ಬದಲಾವಣೆ ಸಾಧ್ಯ ಎಂದರು.

    ಪೂರ್ಣ ಪ್ರಮಾಣದಲ್ಲಿ ಈ ರೋಗವನ್ನು ನಿವಾರಿಸಲು ಸಾಧ್ಯವಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದ ವ್ಯಾಯಾಮ ಅಥವಾ ನಡಿಗೆಯಿಂದ ಕಾಯಿಲೆಯನ್ನು ದೂರವಿಡಬಹುದು. ದಿನನಿತ್ಯ ಉತ್ತಮ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದಲೂ ಮಧುಮೇಹ ಕಡಿಮೆ ಮಾಡಬಹುದು ಎಂದು ತಿಳಿಸಿದರು.

    ಟ್ರಸ್ಟ್ ಸಂಸ್ಥಾಪಕಿ ಕವಿತಾರಾವ್ ಮಾತನಾಡಿ, ಜೀವನ ಶೈಲಿ ಬದಲಿಸಿಕೊಂಡು, ನಿಯಮಿತ ಆಹಾರ ಪದ್ಧತಿ ಹಾಗೂ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಶಿಸ್ತಾಗಿ ಪಾಲಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

    ನಗರ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ರಾಜು ರಾಥೋಡ್, ಮನೋ ವೈದ್ಯಕೀಯ ಕಾರ್ಯಕರ್ತೆ ಎಸ್. ಪದ್ಮರೇಖಾ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಂಯೋಜಕ ಎಂ.ಎಸ್. ಚನ್ನವೀರಪ್ಪ, ಟ್ರಸ್ಟಿನ ಮೇಲ್ವಿಚಾರಕಿ ವರಲಕ್ಷ್ಮಿ, ವಿದ್ಯಾ, ಗಾಯಿತ್ರಿ, ಜಯಮ್ಮ, ಅಕ್ರಸೆಟ್ ಸಂಸ್ಥೆಯ ಸಿದ್ದೇಗೌಡ ಉಪಸ್ಥಿತರಿದ್ದರು.

    ನಿರ್ಲಕ್ಷ್ಯ ಬೇಡ

    ಆಧುನಿಕ ಯುಗದಲ್ಲಿ ದೇಹಕ್ಕೆ ಸಾಕಷ್ಟು ವ್ಯಾಯಾಮ ಹಾಗೂ ಸಮತೋಲನ ಆಹಾರ ಸಿಗುತ್ತಿಲ್ಲ. ಇದರ ಫಲವಾಗಿ ನಾನಾ ರೀತಿಯ ಸಮಸ್ಯೆ ಕಾಡುತ್ತಿವೆ. ಇದರಲ್ಲಿ ಮಧುಮೇಹವೂ ಒಂದಾಗಿದೆ ಎಂದು ಉಪನ್ಯಾಸ ನೀಡಿದ ಎನ್​ಸಿಡಿ ವಿಭಾಗದ ಆಪ್ತ ಸಮಾಲೋಚಕ ಮೋಹನ್ ತಿಳಿಸಿದರು. ಒಂದನೇ ಹಂತದ ಮಧುಮೇಹವನ್ನು ಸಾಮಾನ್ಯವಾಗಿ ನಿಯಂತ್ರಣದಲ್ಲಿಡಬಹುದು. ಆದರೆ ಎರಡನೇ ಹಂತದ ಮಧುಮೇಹಕ್ಕೆ ಕಾಲಕಾಲಕ್ಕೆ ತಪಾಸಣೆ ಅಗತ್ಯ. ಕುಟುಂಬದ ಆರೋಗ್ಯ ನೋಡಿಕೊಳ್ಳುವ ಭರದಲ್ಲಿ ಮಹಿಳೆಯರು ಆರೋಗ್ಯ ನಿರ್ಲಕ್ಷಿಸುವುದು ಸಾಮಾನ್ಯ. ಮಧುಮೇಹವೂ ಇದಕ್ಕೆ ಹೊರತಲ್ಲ. ಮಹಿಳೆಯರು ಸಹ ಮಧುಮೇಹದ ಬಗ್ಗೆ ಜಾಗೃತಿ ವಹಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts