More

    ಶೀಘ್ರ ಕಾಮಗಾರಿ ಪ್ರಾರಂಭಿಸಿ

    ಚನ್ನರಾಯಪಟ್ಟಣ: ತಾಲೂಕಿನ ಗೂಡೆಹೊಸಹಳ್ಳಿ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.

    ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ 212 ಕೋಟಿ ರೂ. ವೆಚ್ಚದ ಗೂಡೆಹೊಸಹಳ್ಳಿ ಏತನೀರಾವರಿ ಯೋಜನೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ವೇಳೆ ಚನ್ನರಾಯಪಟ್ಟಣ ತಾಲೂಕಿನ ದಮ್ಮನಿಂಗಲ, ನಾಗಮಂಗಲ ತಾಲೂಕಿನ ಗಡಿಭಾಗ ಹಾಗೂ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ವ್ಯಾಪ್ತಿಯ ಸುಮಾರು 100ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು ಎಂದರು.

    ಗೂಡೆಹೊಸಹಳ್ಳಿ ನದಿಪಾತ್ರದಿಂದ 17 ಕಿ.ಮೀ. ಕಾಮಗಾರಿಯೊಂದಿಗೆ ದಮ್ಮನಿಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏತನೀರಾವರಿ ಯೋಜನೆ ಕಾಮಗಾರಿಗೆ 40 ಕೋಟಿ ರೂ. ವೆಚ್ಚವಾಗಲಿದೆ. ಚೊಟ್ಟನಹಳ್ಳಿ, ಅರುವನಹಳ್ಳಿ, ಬೊಮ್ಮನಹಳ್ಳಿ, ಕೊತ್ತನಘಟ್ಟ ಹಾಗೂ ಕಬ್ಬಾಳು ಕೆರೆಗೆ ನೀರು ಹರಿಸುವ ಉದ್ದೇಶವಿದೆ. ಹೆಚ್ಚುವರಿಯಾಗಿ ಚೆಲ್ಯ, ಕುಂಭೇನಹಳ್ಳಿ ಹಾಗೂ ದಡಿಘಟ್ಟ ಗ್ರಾಮದ ಕೆರೆಯನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

    ಇನ್ನು 15 ದಿನಗಳಲ್ಲಿ ಪೈಪ್‌ಗಳು ಕಾಮಗಾರಿ ಸ್ಥಳಕ್ಕೆ ಬರಲಿವೆ. ಕಾಮಗಾರಿ ಪೂರ್ಣಗೊಳಿಸಲು ಎರಡೂವರೆ ವರ್ಷ ಕಾಲಾವಧಿ ನಿಗದಿಪಡಿಸಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗವುದು ಎಂದು ಮಾಹಿತಿ ನೀಡಿದರು.
    ನಾಗಮಂಗಲ ಶಾಸಕ ಸುರೇಶ್‌ಗೌಡ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯರಾಮ್, ಮುಖ್ಯ ಇಂಜಿನಿಯರ್ ಮಂಜಪ್ಪ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷ ಶಿವರಾಜ್, ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts