More

    ವಸತಿ, ಖಾತಾ ಸಮಸ್ಯೆಗಳ ಶೀಘ್ರ ಪರಿಹಾರ: ಡಿಸಿಎಂ ಶಿವಕುಮಾರ್ ಭರವಸೆ

    ಬೆಂಗಳೂರು: ನಗರದ ವಿವಿಧೆಡೆ ವಾಸವಾಗಿರುವ ಜನರು ತಮ್ಮ ಸ್ವತ್ತಿನ ಖಾತಾ ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಶೀಘ್ರ ಶಾಶ್ವತ ಪರಿಹಾರ ಒದಗಿಸುವ ಜತೆಗೆ ವಸತಿಹೀನರಿಗೆ ಗೃಹಭಾಗ್ಯ ನೀಡುವ ಕಾರ್ಯಕ್ರಮವನ್ನು ವೇಗಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

    ಬೊಮ್ಮನಹಳ್ಳಿ ವಲಯದ ಜರಗನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ನಾಗರಿಕರಿಂದ ಅಹವಾಲು ಆಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಬೊಮ್ಮನಹಳ್ಳಿ ವಲಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಖಾತೆ ಸಮಸ್ಯೆ, ತೆರಿಗೆ ಹೊರೆ ಹೆಚ್ಚಾಗಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬಂದಿವೆ. ಜನರ ತೆರಿಗೆ ಹೊರೆ ಇಳಿಸುವ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನಿಗೆ ತಿದ್ದುಪಡಿ ತರಬೇಕಾಗಿದೆ. 2020ರಲ್ಲಿ ಜಾರಿಗೆ ತಂದಿರುವ ಕಾಯ್ದೆಯಲ್ಲಿ ದುಪ್ಪಟ್ಟು ದಂಡ ಕಟ್ಟುವಂತಾಗಿದೆ. ಇದನ್ನು ಕಡಿಮೆ ಮಾಡಲು ಚರ್ಚೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜನರಿಗೆ ಕಾಲಾವಕಾಶ ನೀಡಿ, ಪರಿಹಾರವನ್ನು ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ವಸತಿ ಸೌಲಭ್ಯ ಪಡೆಯಲು ಹಣ ಕಟ್ಟಿದ್ದರು ಹಲವರಿಗೆ ಮನೆ ಸಿಕ್ಕಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಇನ್ನೂ ಕೆಲವರು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಇವರೆಲ್ಲರನ್ನು ಭೇಟಿ ಮಾಡಿ ಜವರ ಅಹವಾಲು ಸ್ವೀಕಾರ ಮಾಡುತ್ತೇವೆ. 110 ಹಳ್ಳಿಗಳ ಅಭಿವೃದ್ಧಿ ವಿಚಾರವಾಗಿ ಸ್ಥಳೀಯ ಶಾಸಕರು ಹಾಗೂ ಸಂಸದರು ಬೇಡಿಕೆ ಇಟ್ಟಿದ್ದು, ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡುವ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

    ಅಧಿಕಾರಿ ಅಮಾನತಿಗೆ ಸೂಚನೆ:

    ಬನಶಂಕರಿ ತಾಲೂಕು ಕಚೇರಿಯಲ್ಲಿ ಪಿಂಚಣಿ ಪಡೆಯಲು ಗೊಟ್ಟಿಗೆರೆಯ ಮಣಿಯಮ್ಮ ಅವರು ಹೋದಾಗ ಅಧಿಕಾರಿಗಳೇ ಏಜೆಂಟರ ಬಳಿ ಕಳುಹಿಸುತ್ತಾರೆ. ಗೇಟ್ ಬಳಿ ರಮೇಶ್ ಎಂಬುವವರು ಹಾಗೂ ಕಚೇರಿ ಕೊಠಡಿಯಲ್ಲಿರುವ ಅಧಿಕಾರಿ 4 ಸಾವಿರ ರೂ. ಲಂಚ ಕೇಳಿದ್ದಾಎಂಬ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಬನಶಂಕರಿ ಉಪ ತಹಶೀಲ್ದಾರರನ್ನು ಕರೆದು ಲಂಚ ಕೇಳಿದ ಅಧಿಕಾರಿಯಿಂದ ಮಾಹಿತಿ ಪಡೆದು ಆತನನ್ನು ಅಮಾನತು ಮಾಡುವಂತೆ ಡಿಸಿಎಂ ಸೂಚಿಸಿದರು.

    ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸರ್ಕಾರಿ ಪ್ರೌಢಶಾಲಾ ಶಾಲೆ ನಿರ್ಮಾಣ, ಕುಡಿಯುವ ನೀರು ಸೌಲಭ್ಯ, ಸ್ಮಶಾನಕ್ಕೆ ಜಾಗ, ಅಂಗನವಾಡಿ, ಸಂಚಾರ ದಟ್ಟಣೆ, ಪಾರ್ಕ್ ಸಮಸ್ಯೆ ಬಗೆಹರಿಸುವಂತೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ.

    ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಎಂ.ಕೃಷ್ಣಪ್ಪ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಜಿಲ್ಲಾಧಿಕಾರಿ ದಯಾನಂದ್, ಬಿಡಿಎ ಆಯುಕ್ತ ಎನ್.ಜಯರಾಮ್, ಜಲಮಂಡಳಿ ಅಧ್ಯಕ್ಷ ರಾಮಪ್ರಶಾತ್ ಮನೋಹರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾಗಲಿ:

    ಸರ್ಕಾರದ ಅಧಿಕಾರಿಗಳು ತಮ್ಮ ಕಾರ್ಯವೈಖರಿಯನ್ನು ಇನ್ನಷ್ಟು ಸುಧಾರಣೆ ಮಾಡಿಕೊಳ್ಳಬೇಕು. ಜನರಿಗೆ ಸುಲಭವಾಗಿ ಸಿಗುವ ಜತೆಗೆ ಅವರು ಸಲ್ಲಿಸುವ ಅಹವಾಲುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
    ಈ ಮೊದಲು ಯಾವ ಅಧಿಕಾರಿಗಳೂ ತಮ್ಮ ಹುದ್ದೆ ಮತ್ತು ಹೆಸರಿನ ಬೋರ್ಡ್ ಹಾಕಿಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯದಲ್ಲಿ ಜೆ.ಪಿ.ನಗರದ ಸುರೇಂದ್ರನಾಥ್ ಅವರು ಮಾದರಿಯಾಗಿದ್ದಾರೆ ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

    ಪಾರ್ಕ್ ತೆರೆಯಲು ಸೂಚನೆ:

    ಕರೋನಾ ಸಮಯದಲ್ಲಿ ಮುಚ್ಚಿರುವ ಉದ್ಯಾನಗಳು ಸಾರ್ವಜನಿಕರಿಗೆ ಇನ್ನೂ ತೆರೆದಿಲ್ಲ. ಈಗಲಾದರು ಬಳಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹಿರಿಯ ನಾಗರಿಕ ಸುರೇಂದ್ರನಾಥ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ಉದ್ಯಾನಗಳನ್ನು ತಕ್ಷಣವೇ ಸಾರ್ವಜನಿಕರ ಬಳಕೆಗೆ ತೆರೆಯಿರಿ ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.

    ಎಸ್‌ಡಿಎಂಸಿಯಲ್ಲಿ ಒಂದೇ ಪಕ್ಷದವರು ಏಕೆ?

    ಸರ್ಕಾರಿ ಶಾಲೆಗಳಲ್ಲಿನ ಮೇಲ್ತುವಾರಿ ಸಮಿತಿ ಎಸ್‌ಡಿಎಂಸಿ ಸಮಿತಿಗಳಲ್ಲಿ ಕಳೆದ 15 ವರ್ಷಗಳಿಂದ ಒಂದೇ ಪಕ್ಷದವರು ಸದಸ್ಯರಾಗಿದ್ದಾರೆ. ಬೇರೆಯವರಿಗೆ ಅವಕಾಶವನ್ನೇ ನೀಡುತ್ತಿಲ್ಲ. ನಮಗೂ ಅವಕಾಶ ನೀಡಿ ಎಂಬ ಬೊಮ್ಮನಹಳ್ಳಿಯ ಅನಿಲ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ ಎಲ್ಲ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವ ಭರವಸೆ ನೀಡಿದರು.

    ಹೈಸ್ಕೂಲ್ ನಿರ್ಮಿಸಿಕೊಡಿ:

    ಜರಗನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲ. ಇದನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಅಲ್ಲಿನ ನಿವಾಸಿ ಸತ್ಯನಾರಾಯಣ ಮನವಿ ನೀಡಿದಾಗ, ಶಾಲೆ ನಿರ್ಮಿಸಲು ಜಾಗ ಇದೆಯೇ ಎಂದು ಡಿಸಿಎಂ ಕೇಳಿದರು. ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿರುವ ಜಾಗದಲ್ಲೇ ನಿರ್ಮಿಸಬಹುದು ಎಂದು ಮನವಿದಾರರು ತಿಳಿಸಿದಾಗ ಡಿಸಿಎಂ ಅವರು ಶೀಘ್ರದಲ್ಲೇ ಭರವಸೆ ಈಡೇರಿಸುವ ವಾಗ್ದಾನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts