More

    ಫಲಾನುಭವಿಗಳಿಗೆ ಶೀಘ್ರ ನಿವೇಶನ ಹಸ್ತಾಂತರ

    ಕುಶಾಲನಗರ: ಚಿಕ್ಕತ್ತೂರಿನಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರ್ಕಾರ ಜಾಗ ಮಂಜೂರು ಮಾಡಿದ್ದು, ಕೆಲ ತಾಂತ್ರಿಕ ಸಮಸ್ಯೆಗಳು ಬಗೆಹರಿದ ಕೂಡಲೇ ಫಲಾನುಭವಿಗಳಿಗೆ ನಿವೇಶನ ಒದಗಿಸಲಾಗುತ್ತದೆ ಎಂದು ಕೂಡುಮಂಗಳೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂತೋಷ್ ಮಾಹಿತಿ ನೀಡಿದರು.

    ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು. ಎಸ್ಸಿ, ಎಸ್ಟಿ ಜನಾಂಗ ಹೆಚ್ಚಿರುವ ಸ್ಥಳಗಳಲ್ಲಿ ಕಾಮಗಾರಿಗಳನ್ನು ನಡೆಸಲು ಐಟಿಡಿಪಿ ಇಲಾಖೆಯಿಂದ ಮಾಹಿತಿ ಕೇಳಿದ್ದು, ಸದಸ್ಯರು ಮಾಹಿತಿ ಒದಗಿಸುವಂತೆ ಸಂತೋಷ್ ಮನವಿ ಮಾಡಿದರು.

    ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಲು ಪಂಚಾಯಿತಿ ಸದಸ್ಯರು ಸಲಹೆ ನೀಡಿದರು. ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ಅನಧಿಕೃತ ಕ್ಲಬ್ ತಲೆಯೆತ್ತಿರುವ ಬಗ್ಗೆ ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಸದಸ್ಯರು ಆರೋಪಿಸಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

    ಸುಂದರನಗರದಲ್ಲಿ ತಡರಾತ್ರಿವರೆಗೂ ಮದ್ಯದಂಗಡಿ ತೆರೆದಿದ್ದು, ಇದರಿಂದ ಗಲಾಟೆಗಳು ಹೆಚ್ಚಾಗುತ್ತಿವೆ. ಸಮೀಪದ ಬಸ್ ನಿಲ್ದಾಣ ಮದ್ಯ ಸೇವನೆಯ ಸ್ಥಳವಾಗಿ ಮಾರ್ಪಟ್ಟಿದೆ. ಸಂಬಂಧಿಸಿದ ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ ಶಂಶುದ್ಧೀನ್ ಆಗ್ರಹಿಸಿದರು.

    ಉಪಾಧ್ಯಕ್ಷೆ ಶಶಿಕಲಾ, ಲೆಕ್ಕ ಸಹಾಯಕಿ ಮಮತಾ, ಬಿಲ್ ಕಲೆಕ್ಟರ್ ಅವಿನಾಶ್, ಲೈನಾ, ಪಂಚಾಯಿತಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts