More

    ಪುಷ್ಕರಿಣಿಯ ಪವಿತ್ರ ನೀರು ಸ್ಪರ್ಶಕ್ಕೆ ಸರತಿ ಸಾಲು

    ಕಾರ್ಕಳ: ಐದು ದಿನಗಳ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನ ಮಂಗಳವಾರ ಕ್ಷೇತ್ರದಲ್ಲಿ ಬಲಿಪೂಜೆ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಸಂತ ಲಾರೆನ್ಸರಿಗೆ ವಂದನೆ ಸಲ್ಲಿಸಿದರು.

    ಪೂರ್ವಾಹ್ನದಲ್ಲಿ ಕೊಂಚ ಕಡಿಮೆಯಿದ್ದ ಭಕ್ತರ ಸಂಖ್ಯೆ ಸಾಯಂಕಾಲ ಹೆಚ್ಚಾಯಿತು. ಸಂತ ಲಾರೆನ್ಸರ ಪವಾಡ ಮೂರ್ತಿಯನ್ನು ಮುಟ್ಟಿ ಕೃತಾರ್ಥರಾಗಲು, ಪವಿತ್ರ ಪುಷ್ಕರಿಣಿಯ ನೀರನ್ನು ಮುಟ್ಟಲು ಭಕ್ತರು ಸರತಿಯಲ್ಲಿ ಕಾಯುತ್ತಿದ್ದರು.

    ಪುತ್ತೂರಿನ ಧರ್ಮಾಧ್ಯಕ್ಷ ಡಾ.ಜೀವರ್ಗೀಸ್ ಮಾರ್ ಮಕಾರಿಯೊಸ್ ಕಲಯಿಲ್ ಹಾಗೂ ಶಿವಮೊಗ್ಗದ ಧರ್ಮಾಧ್ಯಕ್ಷ ಡಾ. ಫ್ರಾನ್ಸಿಸ್ ಸೆರಾವೊ ದಿನದ ವಿಶೇಷ ಪೂಜೆಗಳನ್ನು ಕನ್ನಡದಲ್ಲಿ ನೆರವೇರಿಸಿದರು. ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಿದ್ದಲ್ಲದೆ, ಗುರುಗಳು ಹಾಗೂ ಸೇವಾದರ್ಶಿಗಳು ಸಕಲ ಭಕ್ತರ ಶಿರದ ಮೇಲೆ ಹಸ್ತಗಳನ್ನಿಟ್ಟು ಪ್ರಾರ್ಥಿಸಿದರು.

    ಮಂಗಳವಾರ ಧರ್ಮಾಧ್ಯಕ್ಷರ ಕನ್ನಡ ಬಲಿಪೂಜೆಗಳ ಹೊರತಾಗಿ, ಕಲ್ಯಾಣಪುರದ ಕೆನ್ಯೂಟ್ ನೊರೋನ್ಹಾ, ತಲ್ಲೂರಿನ ಜೊನ್ ಮೆಂಡೊನ್ಸ, ಸಂತೆಕಟ್ಟೆಯ ಲೆಸ್ಲಿ ಡಿಸೋಜ, ಪೆರಂಪಳ್ಳಿಯ ಅನಿಲ್ ಡಿಸೋಜ, ಪಿಲಾರಿನ ವಿಶಾಲ್ ಲೋಬೊ, ಶಂಕರಪುರದ ಫರ್ಡಿನಾಂಡ್ ಗೊನ್ಸಾಲ್ವಿಸ್ ಹಾಗೂ ಕುಂದಾಪುರದ ವಿಜಯ್ ಡಿಸೋಜ ಕೊಂಕಣಿ ಭಾಷೆಯಲ್ಲಿ ಬಲಿಪೂಜೆ ನೆರವೇರಿಸಿದರು. ಶಿವಮೊಗ್ಗದ ಕಬಳೆಯ ರಿಚರ್ಡ್ ಪಾಯಸ್ ಹಾಗೂ ಹಾಸನದ ಮೈಕರಿ ಮರಿ ಅವರು ಕನ್ನಡ ಬಲಿಪೂಜೆಗಳನ್ನು ನೆರವೇರಿಸಿದರು.

    ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಕುಟುಂಬದವರೊಂದಿಗೆ ಭೇಟಿ ನೀಡಿ ಬಲಿಪೂಜೆಯಲ್ಲಿ ಪಾಲ್ಗೊಂಡರು. ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ಪ್ರಮೋದ್ ಮಧ್ವರಾಜ್ ಸಂತ ಲಾರೆನ್ಸರಿಗೆ ಮೇಣದ ಬತ್ತಿಗಳನ್ನು ಬೆಳಗಿಸಿ ಗೌರವ ಸಲ್ಲಿಸಿದರು.

    ಇಂದಿನ ಕಾರ್ಯಕ್ರಮ: ಮಹೋತ್ಸವದ ನಾಲ್ಕನೇ ದಿನ ಜ.29ರಂದು ಒಟ್ಟು ಹನ್ನೊಂದು ಬಲಿಪೂಜೆಗಳು ನೆರವೇರಲಿವೆ. ಬೆಳಗ್ಗೆ 10.30ಕ್ಕೆ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಕೊಂಕಣಿ ಭಾಷೆಯಲ್ಲಿ, ಸಾಯಂಕಾಲ 5.30ಕ್ಕೆ ಬೆಳ್ತಂಗಡಿಯ ಧರ್ಮಾಧ್ಯಕ್ಷ ಡಾ.ಲಾರೆನ್ಸ್ ಮುಕ್ಕುಯಿ ಕನ್ನಡ ಭಾಷೆಯಲ್ಲಿ ಬಲಿಪೂಜೆ ನಡೆಸುವರು. ಬೆಳಗ್ಗೆ 7, 8.30, 2.30, 4, 7, 10 ಹಾಗೂ 11.30ಕ್ಕೆ ಕೊಂಕಣಿ ಬಲಿಪೂಜೆಗಳು ಹಾಗೂ ಮಧ್ಯಾಹ್ನ 1 ಮತ್ತು ರಾತ್ರಿ 8.30ಕ್ಕೆ ಕನ್ನಡ ಬಲಿಪೂಜೆಗಳು ನೆರವೇರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts