More

    ಕಾಂಗ್ರೆಸ್​-ಬಿಜೆಪಿ ನಾಯಕರ ಹಾದಿಬೀದಿ ಜಗಳ ಆರಂಭ..

    ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆ ಪ್ರಚಾರ ದಿನೇದಿನೆ ತಾರಕಕ್ಕೇರುತ್ತಿದೆ. ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಬೀದಿ ಜಗಳವಾಡಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆ ಎದುರು ಹೈಡ್ರಾಮಾ ನಡೆಯಿತು.

    ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಗರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆ ಪಂಢರೀಬಾಯಿ ಕೊಲೆ ಬೆದರಿಕೆ ದೂರು ನೀಡಿದ್ದಾರೆ. ಆದರೆ, ಇದು ಸುಳ್ಳು ದೂರು ಎಂದು ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಗದ್ದಲ ಮಾಡಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸಮಾಧಾನಪಡಿಸುವಲ್ಲಿ ಪೊಲೀಸರು ಹೈರಾಣಾದರು.

    ಬೆಳಗ್ಗೆ 9 ಗಂಟೆಯಲ್ಲಿ ಪಕ್ಷದ ಕಾರ್ಯ ಕರ್ತರ ಜತೆ ಪ್ರಚಾರ ನಡೆಸುತ್ತಿದ್ದೆ. ಕಾವೇರಿನಗರ 1ನೇ ಮುಖ್ಯರಸ್ತೆ 1ನೇ ಕ್ರಾಸ್​ನಲ್ಲಿ ಇದ್ದಾಗ ಬಿಜೆಪಿಯ ಮಾಜಿ ಕಾಪೋರೇಟರ್ ವೇಲು ನಾಯ್ಕರ್ ಮತ್ತು ವಸಂತ್, ಅಯೂಬ್ ಸೇರಿ ಹಲವರು ಪ್ರಚಾರಕ್ಕೆ ಅಡ್ಡಿಪಡಿಸಿದರು. ಮನೆ ಮನೆ ಸಮೀಕ್ಷೆ ಮಾಡುತ್ತಿದ್ದ ಪುಸ್ತಕವನ್ನು ಕಿತ್ತು ಎಸೆದರು. ಆ ದೃಶ್ಯಗಳನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಒಡ್ಡಿದರು. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ದೂರಿನಲ್ಲಿ ಪಂಢರೀಬಾಯಿ ಆರೋಪಿಸಿದ್ದಾರೆ. ಬಿಜೆಪಿಯ ವೇಲು ನಾಯ್ಕರ್, ವಸಂತ್, ಆಯೂಬ್, ಆಟೋ ಮುರಳಿ, ಆನಂದ್ ವಿರುದ್ಧ ನಂದಿನಿ ಲೇಔಟ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

    ದಾಳಿ ಮಾಡಿಲ್ಲ: ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ವೇಲು ನಾಯ್ಕರ್, ನಾವು ಕೈ ಕಾರ್ಯಕರ್ತರ ಮೇಲೆ ದಾಳಿ ಮಾಡಿಲ್ಲ. ಅವರು ಮತ ಕೇಳುತ್ತಿದ್ದರು. ಆಗ ಕಾರ್ಯಕರ್ತರು ನೂಕುನುಗ್ಗಲು ಮಾಡುತ್ತಿದ್ದರು. ಅದನ್ನು ಪ್ರಶ್ನಿಸಿದ್ದಷ್ಟೇ. ಎಲ್ಲೂ ಅವರ ಮೇಲೆ ಹಲ್ಲೆ ಮಾಡಿಲ್ಲ. ನೂಕಾಟವನ್ನೇ ಹಲ್ಲೆ ಅಂತ ಆರೋಪಿಸುತ್ತಿದ್ದಾರೆ ಎಂದಿದ್ದಾರೆ. ಪೊಲೀಸರಿಗೆ ಸತ್ಯ ಮನವರಿಕೆ ಮಾಡಿಕೊಡಲು ಬಂದಿದ್ದೆವು. ಗಲಾಟೆ ಮಾಡಲು ಬಂದಿಲ್ಲ ಎಂದು ಠಾಣೆ ಮುಂದೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.

    ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ‘ಡಿಕೆ.. ಡಿಕೆ..’ ಎಂದು ಘೋಷಣೆ ಹಾಕಿ ಅಬ್ಬರಿಸಿದರು. ವೇಲು ನಾಯ್ಕರ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಎಸಿಪಿ ವಿರುದ್ಧವೂ ಕೈ ಮುಖಂಡರು ಅಸಮಾಧಾನ ಹೊರಹಾಕಿದರು. ಮಾಜಿ ಸಂಸದ ದ್ರುವನಾರಾಯಣ, ಮಾಜಿ ಸಚಿವ ಎಚ್.ಎಂ. ರೇವಣ್ಣ ಕಾಯರ್ಕರ್ತರೊಂದಿಗೆ ಸೇರಿ ಕಾವೇರಿಸಿದರು.

    ಧ್ರುವನಾರಾಯಣ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಲಕ್ಷ್ಮೀದೇವಿನಗರದಲ್ಲಿ ಪ್ರಚಾರ ಮಾಡುವ ವೇಳೆ ನಮ್ಮ ಕಾರ್ಯಕರ್ತರಿಗೆ ವೇಲು ನಾಯ್ಕರ್ ಹಲ್ಲೆ ಮಾಡಿದರು. ನಮ್ಮೆದುರೇ ಹಲ್ಲೆ ಮಾಡಿದ್ದಾರೆ. ಹೀಗಾದರೆ ಪಾರದರ್ಶಕ ಚುನಾವಣೆ ಹೇಗೆ ನಡೆಯೋಕೆ ಸಾಧ್ಯ? ಅಧಿಕಾರಿಗಳೂ ಅವರ ಪರವಾಗಿ ವರ್ತಿಸುತ್ತಿದ್ದಾರೆ ಎಂದ ದೂರಿದರು.

    ಬಂಧಿಸದಿದ್ದರೆ ಠಾಣೆ ಮುಂದೆ ಮತ್ತೆ ಹೋರಾಟ

    ಪ್ರತಿಭಟನಾ ಸ್ಥಳಕ್ಕೆ ಸಂಸದ ಡಿ.ಕೆ. ಸುರೇಶ್ ಭೇಟಿ ಕೊಟ್ಟಾಗ ಪರಿಸ್ಥಿತಿಯಲ್ಲಿ ಇನ್ನಷ್ಟು ಬಿಗುವು ಉಂಟಾಯಿತು. ಪೊಲೀಸರ ಕುಮ್ಮಕ್ಕಿನಿಂದಲೇ ಗೂಂಡಾ ವರ್ತನೆ ನಡೆದಿದೆ. ಗಲಾಟೆ ಮಾಡಿದವರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ನಮ್ಮವರನ್ನೇ ಅಲ್ಲಿಂದ ಕಳುಹಿಸಿದ್ದಾರೆ. ಒಬ್ಬ ಮಹಿಳೆ ಮೇಲೆಯೂ ಹಲ್ಲೆ ನಡೆದಿದೆ. ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಎಸಿಪಿ ಕೊಟ್ಟಿದ್ದಾರೆ. ಸಂಜೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಗುರುವಾರ ಠಾಣೆ ಮುಂದೆ ಹೋರಾಟ ನಡೆಸುತ್ತೇವೆ ಸುರೇಶ್ ಹೇಳಿದರು. ಬಿಜೆಪಿಯಿಂದಲೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರತಿ ದೂರು ಸಲ್ಲಿಕೆಯಾಗಿದೆ. ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ, ಮತಯಾಚನೆಗೆ ಅಡ್ಡಿಪಡಿಸಿದ್ದಾರೆಂದು ದೂರು ನೀಡಿದ್ದಾರೆ.

    ಕಾಂಗ್ರೆಸ್ ಇಂತಹ ಗೂಂಡಾ ಸಂಸ್ಕೃತಿಗೆ ಮಣಿಯಲ್ಲ. ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಹೋರಾಟ ಇನ್ನಷ್ಟು ಹೆಚ್ಚು ಮಾಡುತ್ತೇವೆ.

    | ಸಲೀಂ ಅಹಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts