More

  ಸೆಮಿಸ್ಟರ್, ಪರೀಕ್ಷೆ ಒತ್ತಡದಿಂದ ಗುಣಮಟ್ಟದ ಶಿಕ್ಷಣ ದೂರ

  ಶಿವಮೊಗ್ಗ: ಪ್ರಸ್ತುತ ಸನ್ನಿವೇಶದಲ್ಲಿ ಉನ್ನತ ಶಿಕ್ಷಣ ಕವಲುದಾರಿಯಲ್ಲಿದೆ. ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಸೆಮಿಸ್ಟರ್, ಪರೀಕ್ಷೆ ಮುಗಿಸುವ ಒತ್ತಡದಲ್ಲಿ ಅಧ್ಯಾಪಕರು ಹಾಗೂ ಪ್ರಾಧ್ಯಾಪಕರಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಪ್ರೊ. ಸಿ.ರಾಜಶೇಖರ್ ಹೆಬ್ಬಾರ್ ಬೇಸರ ವ್ಯಕ್ತಪಡಿಸಿದರು.

  ಎಟಿಎನ್‌ಸಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣದ ಪುನರುಜ್ಜೀವನ ಮತ್ತು ಭವಿಷ್ಯದ ಸವಾಲುಗಳು ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಇಪಿಯಂತಹ ಶೈಕ್ಷಣಿಕ ಪಠ್ಯ ಯೋಜನೆಗಳು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದರೂ ಅದರ ಪರಿಣಾಮಕಾರಿ ಕಾರ್ಯನಿರ್ವಹಣೆ ಇನ್ನೂ ಸಾಧ್ಯವಾಗಿಲ್ಲ. ಹತ್ತು ಹಲವು ಸವಾಲುಗಳು ನಮ್ಮ ಮುಂದಿರುವಾಗ ಉನ್ನತ ಶಿಕ್ಷಣಕ್ಕೆ ಹಲವು ಬದಲಾವಣೆಗಳು ಅಪೇಕ್ಷಣೀಯವೆನಿಸುತ್ತದೆ ಎಂದರು.
  ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಮಾತನಾಡಿ, ಪ್ರಸ್ತುತ ಉನ್ನತ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕಾರ್ಯ ಮಾಡುತ್ತಿಲ್ಲ. ಉದ್ಯೋಗಾಧಾರಿತ ಕೌಶಲಗಳನ್ನು ಕಲಿಸುವ ಸಾಧ್ಯತೆಗಳು ಶಿಕ್ಷಣದ ಕೆಲವು ಹಂತಗಳಲ್ಲಿ ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
  ಅಧ್ಯಾಪನ ಮತ್ತು ಅಧ್ಯಯನದ ಸಂಬಂಧಗಳು ಪರಸ್ಪರ ಜಟಿಲವಾಗುತ್ತಿದೆ, ಯಾಂತ್ರಿಕವಾಗುತ್ತಿದೆ. ನಮ್ಮ ಪಠ್ಯ ಬೋಧನೆಯ ಕ್ರಮಗಳು ವಿದ್ಯಾರ್ಥಿಯನ್ನು ತಲುಪುವಲ್ಲಿ ವಿಫಲವಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ವ ಅರಿವು, ಪುಸ್ತಕಗಳನ್ನು ಓದುವ ಆಸಕ್ತಿ, ಸ್ವಯಂ ನಿರ್ವಹಣಾ ಕೌಶಲ ಇತ್ಯಾದಿ ಗುಣಗಳು ಬೆಳೆಯದ ಹೊರತು ಬದಲಾವಣೆ ಸಾಧ್ಯವಿಲ್ಲ ಎಂದರು.
  ಬೆಂಗಳೂರು ಶೇಷಾದ್ರಿಪುರಂ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ.ಭಾಸ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಎನ್‌ಇಎಸ್ ನಿರ್ದೇಶಕಿ ಎಂ.ಆರ್.ಸೀತಾಲಕ್ಷ್ಮೀ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಕೆ.ಎಂ.ನಾಗರಾಜ, ಐಕ್ಯುಎಸಿ ಸಂಚಾಲಕ ಪ್ರೊ. ಎನ್.ಮಂಜುನಾಥ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಜಗದೀಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts