More

    ಪುತ್ತೂರಲ್ಲೂ ಬೀದಿಶ್ವಾನಕ್ಕೆ ಸರ್ಜರಿ, ಮೂರು ವರ್ಷದಲ್ಲಿ ಶೇ.60ರಷ್ಟು ಹೆಚ್ಚಳವಾದ ಸಂಖ್ಯೆ

    ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ದಿನೇದಿನೆ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ. ಮೂರು ವರ್ಷಗಳಲ್ಲಿ ಶೇ.60ರಷ್ಟು ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ರಸ್ತೆ ಬದಿ ಸುತ್ತಾಡುವ ಬೀದಿನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ನಗರಸಭೆ ತಿರ್ಮಾನಿಸಿದ್ದು ಎರಡನೇ ಬಾರಿ ಟೆಂಡರ್ ಆಹ್ವಾನಿಸಿದೆ.
    ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ನಗರಸಭೆ ಸಾಮಾನ್ಯ ಸಭೆಗಳಲ್ಲಿ ಸದಸ್ಯರು ಆಗ್ರಹಿಸಿದ್ದರು. ಪರಿಣಾಮ ಬಜೆಟ್‌ನಲ್ಲಿ 15 ಲಕ್ಷ ರೂ. ಕಾದಿರಿಸಲಾಗಿದೆ. ಪ್ರಥಮ ಹಂತದಲ್ಲಿ 300 ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲು ನಿರ್ಧರಿಸಲಾಗಿದೆ. ಒಂದು ನಾಯಿಯ ಸಂತಾನಶಕ್ತಿ ಹರಣ ಚಿಕಿತ್ಸೆಗೆ 1,450 ರೂ. ನಿಗದಿಪಡಿಸಲಾಗಿದೆ. ಪ್ರಾಣಿಗಳ ಕಲ್ಯಾಣ ಸಂಸ್ಥೆಗಳು ಟೆಂಡರ್ ವಹಿಸಿಕೊಂಡು ನುರಿತ ವೈದ್ಯರು ಹಾಗೂ ಸಿಬಂದಿ ಮೂಲಕ ಕಾರ್ಯಾಚರಣೆ ನಡೆಸುತ್ತಾರೆ. ಸಂತಾನಶಕ್ತಿ ಹರಣ ಶಕ್ತಿ ಶಸ್ತ್ರಚಿಕಿತ್ಸೆ ನಂತರ ಆ್ಯಂಟಿ ರೇಬಿಸ್ ಚುಚ್ಚುಮದ್ದು ನೀಡಿ ನಾಯಿಯನ್ನು ಮೂರು ದಿನ ಆರೈಕೆ ಮಾಡುವಂತೆ ಸೂಚಿಸಲಾಗಿದೆ.
    ಕೆಲವು ತಿಂಗಳ ಹಿಂದೆ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಟೆಂಡರ್ ಕರೆಯಲಾಗಿತ್ತು. ಆದರೆ ಯಾವುದೇ ಸಂಸ್ಥೆ ಮುಂದೆ ಬಾರದ ಕಾರಣ ಮರು ಟೆಂಡರ್ ಕರೆಯಲಾಗಿದೆ.

    ರಸ್ತೆ ಬದಿ ನಾಯಿಮರಿಗಳು ವಾಹನದ ಅಡಿಗೆ ಬಿದ್ದು ಸಾಯುತ್ತಿರುವ ಉದಾಹರಣೆಗಳಿವೆ. ಹೀಗಾಗಿ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡುವ ಮೂಲಕ ಬೀದಿನಾಯಿಗಳ ನಿಯಂತ್ರಣಕ್ಕೆ ಆಡಳಿತ ತುರ್ತು ಕ್ರಮ ಕೈಗೊಂಡಿದೆ. ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ 15 ಲಕ್ಷ ರೂ. ಕಾದಿರಿಸಲಾಗಿದೆ. ಪ್ರಥಮ ಹಂತದಲ್ಲಿ ಟೆಂಡರ್ ಕರೆದಿದ್ದರೂ ಯಾರೂ ಮುಂದೆ ಬಂದಿಲ್ಲ, ಅದಕ್ಕಾಗಿ ಎರಡನೇ ಬಾರಿ ಟೆಂಡರ್ ಕರೆಯಲಾಗಿದೆ.
    ಮಧು ಎಸ್.ಮನೋಹರ್
    ಪೌರಾಯುಕ್ತ, ನಗರಸಭೆ ಪುತ್ತೂರು

    ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಳವಾಗಿ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸಾಮಾನ್ಯ ಸಭೆಗಳಲ್ಲಿ ಸದಸ್ಯರೂ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ 15 ಲಕ್ಷ ರೂ. ಅನುದಾನ ಇಡಲಾಗಿದೆ.
    ಜೀವಂಧರ್ ಜೈನ್, ಪುತ್ತೂರು ನಗರಸಭಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts