More

    ಇಂಡಿಯನ್ ಕಲ್ಚರ್ ಗೆ ಪ್ರೇರಕ ಪುಟಾಣಿ ಪ್ರಪಂಚ

    ಹುಬ್ಬಳ್ಳಿ: ಸ್ವರ್ಣಾ ಗ್ರುಪ್ ಆಫ್ ಕಂಪನಿಯು 30 ವರ್ಷ ಪೂರೈಸಿದೆ. ಈ ಸವಿ ಘಳಿಗೆಯನ್ನು ಸ್ಮರಣೀಯವಾಗಿಸಬೇಕು ಎನ್ನುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಇಂಡಿಯನ್ ಕಲ್ಚರ್ ಬೆಳೆಸುವ ಮೊಟ್ಟಮೊದಲ ಬಾರಿಗೆ ವಿನೂತನವಾದ ಕಾರ್ಯಕ್ರಮವನ್ನು ವಿಶೇಷವಾಗಿ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದೆ.

    ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಭಾಗಿತ್ವದಲ್ಲಿ ಪುಟಾಣಿ ಪ್ರಪಂಚ ಎನ್ನುವ ಒಂದು ದಿನದ ಶಿಬಿರವನ್ನು 16ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಸ್ಕೂಲ್ ಹಾಗೂ ಸವಾಯಿ ಗಂಧರ್ವ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಸ್ವರ್ಣಾ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
    ಕಾರ್ಯಕ್ರಮದ ರೂಪರೇಷೆಯ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳಿನ ನಾಗರಿಕರು. ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ದೇಶದ ಸಂಪತ್ತು.

    ಕಳೆದ 2 ದಶಕದಿಂದ ಮಕ್ಕಳು ಆಧುನಿಕ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದರೂ ಮಾರ್ಗದರ್ಶನದ ಕೊರತೆಯಿಂದ ದುರುಪಯೋಗವೂ ಆಗುತ್ತಿದೆ.

    ಇಂಥ ವಿಷಮ ಸ್ಥಿತಿಯಲ್ಲಿ ಮಕ್ಕಳಿಗೆ ವಾಸ್ತವಿಕತೆ ಮನನ ಮಾಡಿಸುವ, ಸಂಪ್ರದಾಯವನ್ನು ತಿಳಿ ಹೇಳುವ ಪ್ರಯತ್ನವನ್ನು ಸಂಸ್ಥೆಯು ತನ್ನ 30ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಾಡುತ್ತಿದೆ.

    ಕೋವಿಡ್ ಸಂದರ್ಭದಲ್ಲಿ ನೆರವಿಗೆ ಬಂದ ಸ್ವರ್ಣಾ ಗ್ರುಪ್ ಆಫ್ ಕಂಪನಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಪುಟಾಣಿ ಪ್ರಪಂಚವೆಂಬ ರಚನಾತ್ಮಕ ಚಟುವಟಿಕೆ ಹಮ್ಮಿಕೊಂಡಿದೆ.
    ಏ.16 ರಂದು ಬೆಳಗ್ಗೆ 8 ಗಂಟೆಗೆ ಯೋಗದೊಂದಿಗೆ ಶಿಬಿರ ಆರಂಭಗೊಳ್ಳುತ್ತದೆ. ಪತಂಜಲಿ ಯೋಗಪೀಠದ ಕರ್ನಾಟಕ ಪ್ರಭಾರಿ ಭವರಲಾಲ್ ಆರ್ಯ ಅವರು ಯೋಗ ಶಿಬಿರ ನಡೆಸಿಕೊಡಲಿದ್ದಾರೆ.

    ರುಕ್ಸಾನಾ ಅವರು ಝುಂಬಾ ನಡೆಸಿಕೊಡುವರು. ಬಳಿಕ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಹೊರಹಾಕಲು ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ‘ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳತ್ತ ನಮ್ಮ ಕಾಳಜಿ’ ಎಂಬ ವಿಷಯ ನೀಡಲಾಗಿದೆ.

    ಇದು ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚು ಪ್ರೀತಿ ತೋರಿಸುವಂತೆ ಮಕ್ಕಳನ್ನು ಪ್ರೇರೇಪಿಸಿದಂತಾಗಲಿದೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಮಕ್ಕಳು ಗ್ರಾಮೀಣ ಕ್ರೀಡೆಗಳನ್ನೇ ಮರೆತಿದ್ದಾರೆ.

    ಗ್ರಾಮೀಣ ಆಟದಲ್ಲಿ ಪಾಠದ ಸಾರ ಅಡಗಿದೆ. ಗೋಲಿ ಆಟ, ಬುಗರಿ ಆಟ, ಲಗೋರಿ, ಕುಂಟಬಿಲ್ಲೆ, ಹಗ್ಗಜಗ್ಗಾಟ, ಲಡ್ಡು ಲಡ್ಡು ತಿಮ್ಮಯ್ಯದಂತಹ ಆಟಗಳನ್ನು ರಾಮು ಮೂಲಗಿ, ಜಾಡಗೌಡರ, ಪ್ರಕಾಶ ಕಂಬಳಿ, ವೀಣಾ ಅಠವಲೆ ಅವರು ಆಡಿಸಲಿದ್ದಾರೆ.

    ಮಕ್ಕಳನ್ನು ಖುಷಿ ಪಡಿಸಲು ರೇನ್ ಡ್ಯಾನ್ಸ್ ಮಾಡಿಸಲಾಗುತ್ತಿದೆ. ಸಹ-ಭೋಜನ ಎನ್ನುವುದನ್ನು ಮರೆತಿದ್ದೇವೆ. ಇದನ್ನು ನೆನಪು ಮಾಡಿಸಲು ಮಕ್ಕಳು ಮನೆಯಿಂದ ತಂದ ಊಟವನ್ನು ಹಂಚಿಕೊಂಡು ಸೇವಿಸಬೇಕು.

    ನನ್ನ ಕನಸಿನ ಕರ್ನಾಟಕ ಭಾಷಣ ಸ್ಪರ್ಧೆ, ಸಂಗೀತ ಸ್ಪರ್ಧೆ, ಡ್ಯಾನ್ಸ್‌ಗಳ ವಿಡಿಯೋ ಆಹ್ವಾನಿಸಲಾಗಿದೆ. ಉತ್ತಮ ಪ್ರದರ್ಶನಕಾರರಿಗೆ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗುವುದು ಪ್ರಶಸ್ತಿಯನ್ನೂ ನೀಡಲಾಗುವುದು.

    ಮಹನ್ಯ ಪಾಟೀಲ, ಪ್ರಾಚಿ ನಾಯಕ, ಶಿವಪ್ರಸಾದ, ಬಿ.ಎಸ್. ಮಾಳವಾಡ ನಿರ್ಣಾಯಕರಾಗಿರುತ್ತಾರೆ. ವಿಜೇತರಿಗೆ ಆಕರ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಅಶ್ವಿನ ಶೆಟ್ಟಿಯಾರ್, ಡಾ. ಆಕಾಶ ಬೈರಿಕೊಪ್ಪ ತಂಡದವರಿಂದ ಫುಟ್‌ಬಾಲ್ ಕಲೆಗಾರಿಕೆ ಪ್ರದರ್ಶನ ನಡೆಯಲಿದೆ.

    ಸಿದ್ಧಲಿಂಗೇಶ ಹಳ್ಳಿಕೇರಿಮಠ ಅವರಿಂದ ಹಾಸ್ಯ, ಸಂಜೀವ ಅವರಿಂದ ಮ್ಯಾಜಿಕ್ ಶೋ ನಡೆಯಲಿದೆ. ಸಾಧಕ ಬಾಲಪ್ರತಿಭೆಗಳಾದ ಮಹನ್ಯ ಪಾಟೀಲ, ಡಾ. ವೈದೃತಿ, ತ್ರಿಶಾ ಜಡಾಲ, ಓಜಲ್ ನಲವಡಿ ಇತರರನ್ನು ಸನ್ಮಾನಿಸಲಾಗುವುದು.

    ಈ ತೆರನಾದ ಸಾಕಷ್ಟು ವಿಶೇಷ, ಆಕರ್ಷಕ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳು ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದ್ದು ಶಿಬಿರದ ಸದುಪಯೋಗ ಪಡೆಯಬೇಕೆಂದು ಪ್ರಸಾದ ಅವರು ಕೋರಿದರು.


    ವಿಜಯವಾಣಿ-ದಿಗ್ವಿಜಯ ನ್ಯೂಸ್ ಅನೇಕ ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತ ಬಂದಿದೆ. ಇದೀಗ ವಿಶೇಷವಾಗಿ ರಜೆ ಅವಧಿಯಲ್ಲಿ ಮಕ್ಕಳಿಗಾಗಿ ಯೋಗ, ಚಿತ್ರಕಲೆ ಸೇರಿ ಅನೇಕ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ತುತ್ಯರ್ಹ.
    ಭವರಲಾಲ್ ಆರ್ಯ
    ಕರ್ನಾಟಕ ಪ್ರಭಾರಿ ಪತಂಜಲಿ ಯೋಗಪೀಠ

    ಹೀಗೆ ನೋಂದಣಿ ಮಾಡಿ

    ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಮಕ್ಕಳ ಹೆಸರು, ಶಾಲೆ ಮತ್ತು ತರಗತಿಯ ವಿವರಗಳನ್ನು
    ಮೊ. 8884432228 ನಂಬರ್‌ಗೆ ವಾಟ್ಸಾಪ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಸ್ಥಳದಲ್ಲಿಯೂ ನೋಂದಣಿಗೆ ಅವಕಾಶ ಉಂಟು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts