More

    ಮಲೆನಾಡಿನಲ್ಲಿ ಪುಷ್ಯ ಮಳೆ ಅಬ್ಬರ

    ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಪುಷ್ಯ ಮಳೆ ಅಬ್ಬರಿಸುತ್ತಿದ್ದು ಭಾನುವಾರ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರಿ ವರ್ಷಧಾರೆಯಾಗಿದೆ. ಇದರಿಂದ ನದಿಗಳ ಹರಿವಿನಲ್ಲಿ ಏರಿಕೆಯಾಗಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು ಲಿಂಗನಮಕ್ಕಿ ನೀರಿನ ಮಟ್ಟ ಕಳೆದ ಐದು ದಿನದಲ್ಲೇ ಬರೋಬ್ಬರಿ 13.4 ಅಡಿ ಏರಿಕೆ ಕಂಡಿದೆ.ನಾಲ್ಕೈದು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದೆ. ಪರಿಣಾಮ ದಿನದಿಂದ ದಿನಕ್ಕೆ ಲಿಂಗನಮಕ್ಕಿ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಳವಾಗಿದೆ. ಜು.19ರಂದು 20 ಸಾವಿರ ಕ್ಯೂಸೆಕ್ ದಾಟಿದ್ದ ನೀರಿನ ಒಳಹರಿವು, ಭಾನುವಾರ ಬೆಳಗ್ಗೆ ವೇಳೆಗೆ 52 ಸಾವಿರ ಕ್ಯೂಸೆಕ್ ದಾಟಿದೆ. ಉಳಿದಂತೆ ಜಿಲ್ಲಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 58.44 ಮಿಮೀ ಮಳೆಯಾಗಿದೆ. ಸಾಗರ ತಾಲೂಕಿನಲ್ಲಿ 107 ಮಿಮೀ, ಹೊಸನಗರದಲ್ಲಿ 98, ತೀರ್ಥಹಳ್ಳಿಯಲ್ಲಿ 77.90, ಸೊರಬದಲ್ಲಿ 53.10, ಶಿಕಾರಿಪುರದಲ್ಲಿ 36, ಶಿವಮೊಗ್ಗದಲ್ಲಿ 19.60, ಭದ್ರಾವತಿಯಲ್ಲಿ 17.50 ಮಿಮೀ ವರ್ಷಧಾರೆಯಾಗಿದೆ. ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಪಡೆದಿರುವ ತುಂಗಾ ಜಲಾಶಯಕ್ಕೆ ಭಾನುವಾರ ಮಧ್ಯಾಹ್ನ 3ರ ವೇಳೆಗೆ ನೀರಿನ ಒಳಹರಿವು 49,802 ಕ್ಯೂಸೆಕ್‌ಗೆ ತಲುಪಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 49,622 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹಾಗಾಗಿ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಸೂಚನೆ ಕೂಡ ನೀಡಲಾಗಿದೆ. ಶೃಂಗೇರಿ, ಕಿಗ್ಗ ಭಾಗದಲ್ಲಿ ಮಳೆ ಹೆಚ್ಚಾಗಿರುವ ಕಾರಣ ತುಂಗಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚುತ್ತಿದೆ.ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗೆಯ ಮಾಹಿತಿಯಂತೆ ಜಲಾಶಯದ ಒಳಹರಿವು 12,169 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಪ್ರಸ್ತುತ ಜಲಾಶಯದ ನೀರಿನ ಮಟ್ಟ 145 ಅಡಿಗೆ ಏರಿಕೆಯಾಗಿದ್ದು 167 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts