More

    ಏ.1ರಿಂದ ಶುದ್ಧ ಪೆಟ್ರೋಲ್

    ನವದೆಹಲಿ: ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಏಪ್ರಿಲ್ 1ರಿಂದ ಭಾರತ ಕೂಡ ವಿಶ್ವದ ಅತ್ಯಂತ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್​ನ ಮಾರಾಟ ಪ್ರಾರಂಭಿಸಲಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಯುರೋ-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲನ್ನು ಪೂರೈಸಲಿವೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್​ಗೆ 50 ಪೈಸೆಯಿಂದ 1 ರೂಪಾಯಿವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

    ಭಾರತ ಕೇವಲ 3 ವರ್ಷದಲ್ಲಿ ಯುರೋ-6 ದರ್ಜೆಯ ತೈಲ ಮಾರಾಟದ ಗುರಿ ಸಾಕಾರಗೊಳಿಸಿಕೊಂಡಿದೆ. ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ಇಷ್ಟು ವೇಗವಾಗಿ ಯುರೋ-6 ದರ್ಜೆ ತೈಲವನ್ನು ಹೊಂದಿಲ್ಲ. ಈ ಮೂಲಕ ಜಗತ್ತಿನ ಆಯ್ದ ದೇಶಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಲಿದೆ.

    ಪ್ರತಿ ಮಿಲಿಯನ್ ಗಂಧಕದಲ್ಲಿ ಕೇವಲ 10 ಭಾಗಗಳಷ್ಟನ್ನು ಹೊಂದಿರುವ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಮೂಲಕ ವಾಯು ಮಾಲಿನ್ಯ ತಡೆಗಟ್ಟಬಹುದಾಗಿದೆ. ಇಂಥ ಇಂಧನ ಬಳಸುವ ವಾಹಗಳು ಕಡಿಮೆ ಇಂಗಾಲವನ್ನು ಹೊರಸೂಸುತ್ತವೆ. ಹೀಗಾಗಿ 2020ರಿಂದ ದೇಶಾದ್ಯಂತ ಯುರೋ-6 ದರ್ಜೆ ತೈಲ ಮಾರಾಟ ಮಾಡಲು 2015ರಲ್ಲಿ ಗುರಿ ಹಾಕಿಕೊಳ್ಳಲಾಗಿತ್ತು. ಪೈಲಟ್ ಯೋಜನೆಯಾಗಿ 2018 ಏಪ್ರಿಲ್ 1ರಿಂದ ನವದೆಹಲಿಯಲ್ಲಿ ಹಾಗೂ 2019 ರಿಂದ ರಾಜಸ್ಥಾನದ ನಾಲ್ಕು ಜಿಲ್ಲೆಗಳು, ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಒಳಪಡುವ ಉತ್ತರಪ್ರದೇಶದ 8 ಜಿಲ್ಲೆಗಳಲ್ಲಿ ಯುರೋ-6 ದರ್ಜೆಯ ಪೆಟ್ರೋಲ್, ಡೀಸೆಲ್​ನ್ನು ಮಾರಾಟ ಮಾಡಲಾಗುತ್ತಿದೆ.

    3 ವರ್ಷಗಳಲ್ಲಿ ಭಾರತ ಸಾಧನೆ

    ಭಾರತ 2010ರಲ್ಲಿ 350 ಪಿಪಿಎಂ ಗಂಧಕ ಅಂಶದ ಯುರೋ-3 ದರ್ಜೆಯ ಇಂಧನ ಮಾರಾಟ ಪ್ರಾರಂಭಿಸಿತು. ಇಲ್ಲಿಂದ 50 ಪಿಪಿಎಂ ಗಂಧಕ ಅಂಶ ಹೊಂದಿರುವ ಯುರೋ-4 ದರ್ಜೆಯ (ಇದು ಭಾರತ್-4 ಹಂತಕ್ಕೆ ತತ್ಸಮಾನವಾದ ಶ್ರೇಣಿ) ತೈಲಕ್ಕೆ ಬದಲಾಯಿಸಿಕೊಳ್ಳಲು ಬರೋಬ್ಬರಿ 7 ವರ್ಷ ಹಿಡಿದವು. ಬಳಿಕ ಯುರೋ-6 ದರ್ಜೆಗೆ ಬದಲಾಗಲು ಭಾರತ ಕೇವಲ 3 ವರ್ಷ ತೆಗೆದುಕೊಂಡಿದೆ. ಪ್ರಸ್ತುತ ದೇಶದೆಲ್ಲೆಡೆ ಯುರೋ-4 ದರ್ಜೆಯ ತೈಲ ಮಾರಾಟ ಮಾಡಲಾಗುತ್ತಿದೆ. ಈ ಮೊದಲು ಯುರೋ-5ರ ದರ್ಜೆಗೆ ಏರಿಕೆಯಾಗಿ ಬಳಿಕ ಯುರೋ-6 ಗುರಿ ಮುಟ್ಟುವ ಯೋಜನೆ ಇತ್ತು. ಇದಕ್ಕೆ 4ರಿಂದ 6 ವರ್ಷ ಸಮಯ ಹಿಡಿಯುತ್ತಿತ್ತು. ಜತೆಗೆ ತೈಲ ಸಂಸ್ಕರಣಾಕಾರರು ಮತ್ತು ವಾಹನ ತಯಾರಕರು ಮೊದಲು ಯುರೋ-5 ದರ್ಜೆಯ ಇಂಧನ ಮತ್ತು ಇಂಜಿನ್​ಗಳನ್ನು ಉತ್ಪಾದಿಸಿ ನಂತರ ಮತ್ತೆ ಯುರೋ-6 ದರ್ಜೆಗೆ ಬದಲಾಯಿಸಬೇಕಿತ್ತು. ಇದಕ್ಕೆ ಎರಡು ಬಾರಿ ಹೂಡಿಕೆ ಮಾಡಬೇಕಾಗಿತ್ತು. ಇದನ್ನು ತಪ್ಪಿಸಲು ಈಗ ಯುರೋ- 4ರಿಂದ ನೇರವಾಗಿ ಯುರೋ-6ರ ದರ್ಜೆಗೆ ಬದಲಾವಣೆ ಮಾಡಲಾಗಿದೆ.

    ಯುರೋ-6 ದರ್ಜೆ ತೈಲದಿಂದ ಏನಾಗುತ್ತದೆ?

    ದೇಶದ ಅನೇಕ ದೊಡ್ಡ ನಗರಗಳಲ್ಲಿ ವಾಯುಮಾಲಿನ್ಯ ಮಟ್ಟ ವಿಪರೀತವಾಗಿದ್ದು, ಅಪಾಯಕಾರಿ ಮಟ್ಟಕ್ಕಿಂತ ಮೇಲೇರಿದೆ. ಯುರೋ-6 ದರ್ಜೆಯ ತೈಲ ಬಳಕೆಯ ವಾಹನಗಳು ಅತ್ಯಂತ ಕಡಿಮೆ ಹೊಗೆ ಹೊರಸೂಸುವುದರಿಂದ ವಾಯು ಮಾಲಿನ್ಯ ಸಮಸ್ಯೆ ತುಸು ಮಟ್ಟಿಗೆ ಹತೋಟಿಗೆ ಬರುತ್ತದೆ. ಈ ಹಿನ್ನೆಲೆ ಅತಿ ಹೆಚ್ಚು ಪ್ರದೂಷಣೆ ಸಂಕಷ್ಟ ಎದುರಿಸುತ್ತಿರುವ ದೆಹಲಿಯಲ್ಲಿ ಯುರೋ-6 ತೈಲ ಮಾರಾಟವನ್ನು ಮೊದಲು ಪ್ರಾರಂಭಿಸಲಾಗಿದೆ. ಇದರಿಂದ ವಾಯು ಮಾಲಿನ್ಯದ ಮಟ್ಟ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಮುಂದಿನ ಕೆಲ ವಾರಗಳಲ್ಲಿ ಇಂಧನ ಡಿಪೋಗಳಿಂದ ರವಾನೆಯಾಗಲಿದೆ. ನಿರೀಕ್ಷೆಯಂತೆ ಏ.1ರಿಂದ ಯುರೋ-6 ದರ್ಜೆಯ ತೈಲ ದೇಶದೆಲ್ಲೆಡೆಯ ಪೆಟ್ರೋಲ್ ಪಂಪ್​ಗಳಿಗೆ ತಲುಪಿ, ಗ್ರಾಹಕರಿಗೆ ಲಭ್ಯವಾಗಲಿದೆ. ಇದರಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗಿದೆ.

    | ಸಂಜೀವ್ ಸಿಂಗ್ ಐಒಸಿ ಅಧ್ಯಕ್ಷ

    ಕೇವಲ 3 ವರ್ಷದಲ್ಲಿ ಯುರೋ-6 ದರ್ಜೆಯ ತೈಲ ಮಾರಾಟದ ಗುರಿ ಸಾಕಾರ

    ಯುರೋ-6 ಹೆಚ್ಚು ಸುಧಾರಿತ ಮತ್ತು ಕಡಿಮೆ ಹೊಗೆ ಸೂಸುವ ಇಂಧನ

    ಭಾರತದ ಪ್ರಮುಖ ಸಮಸ್ಯೆಯಾದ ವಾಯು ಮಾಲಿನ್ಯಕ್ಕೆ ಯುರೋ-6 ಅತ್ಯುತ್ತಮ ಪರಿಹಾರ

    ಕಡಿಮೆ ಪಿಪಿಎಂ ಗಂಧಕ ಹೊಂದಿದ ಯುರೋ-6 ಇಂಧನ ಉತ್ಪಾದಿಸುವ ತೈಲ ಸಂಸ್ಕರಣ ಘಟಕಗಳನ್ನು ಉನ್ನತೀಕರಿಸಲು – 35 ಸಾವಿರ ಕೋಟಿ ರೂ. ವೆಚ್ಚ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts