More

    ತೆರಿಗೆ ಪರಿಷ್ಕರಣೆಗೆ ಸದಸ್ಯರ ವಿರೋಧ

    ಶಿಗ್ಗಾಂವಿ: ಪುರಸಭೆಯ ತೆರಿಗೆಯೇತರ ಆದಾಯದ ಮತ್ತು ಪರವಾನಗಿ ಶುಲ್ಕ ಪರಿಷ್ಕರಣೆಗೆ ಸದಸ್ಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.

    ಪಟ್ಟಣದ ಪುರಸಭೆಯ ಸಭಾಭವನದಲ್ಲಿ ನೂತನ ಸದಸ್ಯರ ಮೊದಲ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ತೆರಿಗೆಯೇತರ ಆದಾಯ ಮತ್ತು ಪರವಾನಗಿ ಶುಲ್ಕ ಪರಿಷ್ಕರಣೆ ಮಾಡುವ ಕುರಿತು ಸದಸ್ಯರಿಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪರಶುರಾಮ ಸೊನ್ನದ, ‘ತೆರಿಗೆ ಹೆಚ್ಚಳದಿಂದ ಜನ ಸಾಮನ್ಯರಿಗೆ ಹೊರೆ ಯಾಗಿದೆ. ಕೇವಲ 200 ಗೆ ಸಿಗುತ್ತಿದ್ದ ಎನ್​ಓಸಿಗೆ ತೆರಿಗೆ ಹೆಚ್ಚಳದಿಂದ ಮೂರು ಸಾವಿರ ತೆರಬೇಕಾಗಿದೆ. ಒಂದು ಸಾವಿರ ರೂ. ಇದ್ದ ಕಟ್ಟಡ ನವೀಕರಣ ಫೀ ನಾಲ್ಕು ಸಾವಿರಕ್ಕೆ ಹೆಚ್ಚಳವಾಗಿದೆ. ಈ ರೀತಿ ಅನೇಕ ಕರ ಮತ್ತು ಪರವಾನಗಿ ಶುಲ್ಕಗಳನ್ನು ಹಿಂದಿನ ಪುರಸಭೆ ಮುಖ್ಯಾಧಿಕಾರಿ ಕಾನೂನು ಬಾಹಿರವಾಗಿ ಏರಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹೊರೆಯಾಗಿದೆ. ಕೂಡಲೆ ಪರಿಷ್ಕೃತ ಕರ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.

    ಸುಭಾಸ ಚವ್ಹಾಣ ಮಾತನಾಡಿ, ಮುಖ್ಯಾಧಿಕಾರಿ ತೆರಿಗೆ ದರ ಪರಿಷ್ಕರಣೆ ಕುರಿತು ಯಾವುದೇ ಠರಾವು ಮಾಡದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಕುಂಟು ನೆಪ ಹೇಳುವುದನ್ನು ಬಿಟ್ಟು ಮುಂದಿನ ಸಭೆಗೆ ಎಲ್ಲ ದಾಖಲಾತಿಗಳನ್ನು ಹಾಜರುಪಡಿಸಬೇಕು. ತೆರಿಗೆ, ಪರವಾನಗಿ ಶುಲ್ಕಗಳ ದರಪಟ್ಟಿಯನ್ನು ಕಚೇರಿಯಲ್ಲಿ ಹಾಕಬೇಕು. ನಿಗದಿತ ತೆರಿಗೆ ಹಣ ಬಿಟ್ಟು ಸಿಬ್ಬಂದಿ ಹೆಚ್ಚಿನ ಹಣ ಪಡೆಯುವುದನ್ನು ತಡೆಯಬೇಕು ಎಂದರು.

    ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜು ಬ್ಯಾಹಟ್ಟಿ, ದಯಾನಂದ ಅಕ್ಕಿ, ಸಿದ್ದಾರ್ಥಗೌಡ ಪಾಟೀಲ, ಸಂಗೀತಾ ವಾಲ್ಮೀಕಿ, ಗೌಸಖಾನ ಮುನ್ಸಿ, ವಸಂತಾ ಬಾಗೂರ, ರೂಪಾ ಬನ್ನಿಕೊಪ್ಪ, ರಮೇಶ ವನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

    ಲೋಕಾಯುಕ್ತ ತನಿಖೆಗೆ ಒತ್ತಾಯ: ‘ಬಡವರು ಅತಿಕ್ರಮಿಸಿಕೊಂಡಿರುವ ಜಾಗಗಳನ್ನು ಮಾತ್ರ ತೆರವುಗೊಳಿಸಿದ್ದೀರಿ. ಸಂತೆ ಮೈದಾನ ಸೇರಿದಂತೆ ಪಟ್ಟಣದ ಬಹುತೇಕ ಪುರಸಭೆ ಜಾಗದಲ್ಲಿ ಶ್ರೀಮಂತರು ಮನೆ, ಅಂಗಡಿಗಳನ್ನು ನಿರ್ವಿುಸಿಕೊಂಡಿದ್ದಾರೆ ಅವುಗಳನ್ನು ಯಾಕೆ ತೆರವುಗೊಳಿಸಿಲ್ಲ. ಕೂಡಲೆ ಅವುಗಳನ್ನು ತೆರವುಗೊಳಿಸಬೇಕು. ನೀರು ಸರಬರಾಜು, ಬೋರ್​ವೆಲ್, ಪಂಪ್​ಸೆಟ್ ಖರೀದಿಗೆ ಸಂಬಂಧಿಸಿದಂತೆ 2015ರಿಂದ ಇಂದಿನ ವರೆಗೆ ಲೋಕಾಯುಕ್ತದಿಂದ ಸೂಕ್ತ ತನಿಗೆ ನಡೆಸಬೇಕು’ ಎಂದು ಸರ್ವ ಸದಸ್ಯರು ಮುಖ್ಯಾಧಿಕಾರಿಗೆ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts