More

    26ರಿಂದ ಶಿವಮೊಗ್ಗದಲ್ಲಿ ಫಲಪುಷ್ಪ ಪ್ರದರ್ಶನ, ಪುನೀತ್‌ ಹೂವಿನ ಕಲಾಕೃತಿ ಆಕರ್ಷಣೆ

    ಶಿವಮೊಗ್ಗ: ಗಣರಾಜ್ಯೋತ್ಸವ ನಿಮಿತ್ತ ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಆಶ್ರಯದಲ್ಲಿ 61ನೇ ಫಲಪುಷ್ಪ ಪ್ರದರ್ಶನ ಜ.26ರಿಂದ 29ರವರೆಗೆ ತೋಟಗಾರಿಕೆ ಇಲಾಖೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಆವರಣದಲ್ಲಿ ಆಯೋಜನೆಗೊಂಡಿದೆ. ಈ ಬಾರಿ ಗಂಧದಗುಡಿ, ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಹಾಗೂ ವಿಮಾನ ನಿಲ್ದಾಣದ ಹೂವಿನ ಕಲಾಕೃತಿ ಪ್ರದರ್ಶನದ ಆಕರ್ಷಣೆಯಾಗಿವೆ.
    ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನ ಇದಾಗಿದ್ದು ರೈತರಿಗೆ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶಿಕೆ, ಮಹಿಳೆಯರಿಗೆ ರಂಗೋಲಿ(ವಿವಿಧ ಸಸ್ಯದ ಭಾಗಗಳು, ಹೂವು, ಮೊಗ್ಗು, ಎಲೆ, ಹಣ್ಣು, ಬೀಜ, ಧಾನ್ಯಗಳ ಬಳಕೆ) ಸ್ಪರ್ಧೆ, ಹಾಗೂ ಕೈತೋಟ, ತಾರಸಿ ತೋಟ, ಉದ್ಯಾನ (ಮನೆ, ಶಾಲೆ, ಅಂಗನವಾಡಿ, ಕಚೇರಿ, ಖಾಸಗಿ ಸಂಸ್ಥೆ)ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸೋಮವಾರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಎನ್.ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಜಿಲ್ಲೆಯ ಸಸ್ಯ ಸಂಪತ್ತು ಮತ್ತು ವನ್ಯ ಜೀವಿ ಆಕೃತಿಗಳನ್ನೊಳಗೊಂಡ ಗಂಧದಗುಡಿ ನಿರ್ಮಾಣಗೊಳ್ಳಲಿದೆ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಹೂವಿನ ಕಲಾಕೃತಿ ತಲೆ ಎತ್ತಲಿದೆ. ಅಭಿವೃದ್ಧಿ ಸಂಕೇತವಾಗಿ ವಿಮಾನ ನಿಲ್ದಾಣ, ಸ್ಮಾರ್ಟ್‌ಸಿಟಿ ಮಾದರಿ, ಎರಡ್ಮೂರು ಬಗೆಯ ಹೂವಿನ ಫೋಟೊ ಫ್ರೇಮ್‌ಗಳು ಮತ್ತು ಮಕ್ಕಳ ಆಷರ್ಕಣೀಯ ಹೂವಿನ ಕಲಾಕೃತಿಗಳು ರಚನೆ ಆಗಲಿದೆ ಎಂದರು.
    ಜಿಲ್ಲೆಯ ಎಲ್ಲ ತಾಲೂಕುಗಳ ರೈತರು ಬೆಳೆದ ವಿಶಿಷ್ಟ, ವಿಶೇಷ ರೀತಿಯ ಹೂವು, ಹಣ್ಣು, ತರಕಾರಿ ಮತ್ತಿತರೆ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಸ್ಪರ್ಧೆ ಇರಲಿದೆ. ಎನ್‌ಆರ್‌ಎಲ್‌ಎಂ(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್)-ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ವೈವಿಧ್ಯಮಯ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
    ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ಖಜಾಂಚಿ ಜಿ.ಎಂ.ರಘು ದುಮ್ಮಳ್ಳಿ, ಪದನಿಮಿತ್ತ ಕಾರ್ಯದರ್ಶಿ ಕೆ.ಆರ್.ವನಮಾಲ, ನಿರ್ದೇಶಕರಾದ ಎ.ಎಸ್.ಚಂದ್ರಕಾಂತ ಅಸಗೊಡು, ಚಂದ್ರಕಲಾ ಸುದ್ದಿಗೋಷ್ಠಿಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts