More

    22ರಂದು ಶ್ರೀ ರಾಮದೇವರ ಪುನರಷ್ಟಬಂಧ ಕುಂಭಾಭಿಷೇಕ

    ಶೃಂಗೇರಿ: ವಿದ್ಯಾರಣ್ಯಪುರ ಶ್ರೀ ರಾಮದೇವರ ಪುನರಷ್ಟಬಂಧ ಕುಂಭಾಭಿಷೇಕ ಜ.22ರಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ನೆರವೇರಿಸಲಿದ್ದಾರೆ.

    ಬೆಳಗ್ಗೆ 7 ಗಂಟೆಯಿಂದ ರತ್ನನ್ಯಾಸ-ಪ್ರತಿಷ್ಠೆ-ಅಷ್ಟಬಂಧ ಸಂಯೋಜನೆ-ಪ್ರತಿಷ್ಠಾಂಗ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ. 9.15ಕ್ಕೆ ದೇವಾಲಯಕ್ಕೆ ಆಗಮಿಸಲಿರುವ ಕಿರಿಯ ಶ್ರೀಗಳು ಶ್ರೀರಾಮತಾರಕ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಶ್ರೀ ರಾಮದೇವರ ಪ್ರತಿಷ್ಠಾ ಕುಂಭಾಭಿಷೇಕ, ಮಹಾಪೂಜೆ ಹಾಗೂ ನೀರಾಜನ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ.
    ಶೃಂಗೇರಿ ವಿದ್ಯಾರಣ್ಯಪುರ ಅಗ್ರಹಾರ 1386ರಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ಹರಿಹರನು ಜಗದ್ಗುರು ಶ್ರೀ ವಿದ್ಯಾರಣ್ಯರು ಮುಕ್ತರಾದ ನಂತರ ಕಟ್ಟಿದ ಅಗ್ರಹಾರ ಎಂಬ ಉಲ್ಲೇಖ ಮಠದ ತಾಮ್ರ ಶಾಸನದಲ್ಲಿದೆ. 33ನೇ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮೀಜಿ ಆದೇಶದಂತೆ ದೇವಾಲಯ ಕಟ್ಟಲಾಯಿತು. 1989ರಲ್ಲಿ ದೇವಸ್ಥಾನದ ಮರು ನಿರ್ಮಾಣಕ್ಕೆ ಸಂಕಲ್ಪಗೈದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ 1990ರಲ್ಲಿ ಕುಂಭಾಭಿಷೇಕ ನೆರವೇರಿಸಿದರು. 2007ರಲ್ಲಿ ಪುನಃ ಪ್ರತಿಷ್ಠಾಕುಂಭಾಭಿಷೇಕ ನೆರವೇರಿಸಿ ಶ್ರೀ ಭಾರತೀತೀರ್ಥ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಿ 2013ರಲ್ಲಿ ಸಭಾಭವನ ಉದ್ಘಾಟಿಸಿದರು. ಎರಡು ವರ್ಷಗಳ ಹಿಂದೆ 37ನೇ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ದೇವಾಲಯಕ್ಕೆ ಆಗಮಿಸಿ ದೇವರಿಗೆ ರಜತಪ್ರಭಾವಳಿ ಸಮರ್ಪಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ದಿನ ವಿದ್ಯಾರಣ್ಯಪುರದ ಶ್ರೀರಾಮ ದೇವಸ್ಥಾನದಲ್ಲಿ ಜಗದ್ಗುರುಗಳು ಮರು ಪ್ರತಿಷ್ಠೆ ಕುಂಭಾಭಿಷೇಕ ನೆರವೇರಿಸಲಿದ್ದಾರೆ.
    ಅಗ್ರಹಾರದಲ್ಲಿ 130 ವರ್ಷಗಳ ಹಿಂದೆ ಕೆಟ್ಟಶಕ್ತಿಗಳ ಹೆಚ್ಚಿ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಅಂದಿನ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಅವರಿಗೆ ಅಲ್ಲಿನ ಜನರು ಮನವಿ ಮಾಡಿಕೊಂಡಾಗ ಶ್ರೀರಾಮ ದೇವಸ್ಥಾನ ನಿರ್ಮಾಣ ಮಾಡಿ ಎಂಬ ಆದೇಶ ನೀಡಿ ಕುಂಭಾಭಿಷೇಕ ನೆರವೇರಿಸಿದರು. ಬಳಿಕ ಅಲ್ಲಿನ ಜನರಿಗೆ ಕಾಡುತ್ತಿದ್ದ ಸಮಸ್ಯೆ ದೂರವಾಯಿತು ಎಂಬುದು ಐತಿಹ್ಯ. ಸುಂದರ ಶ್ರೀ ಕೋದಂಡರಾಮನ ಮೂರ್ತಿಗೆ ಪ್ರತಿನಿತ್ಯ ಪೂಜೆ, ರಾಮೋತ್ಸವ ನೆರವೇರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts