More

    ಮಾ.3ರಂದು ಪಲ್ಸ್ ಪೋಲಿಯೋ ಅಭಿಯಾನ: 0-5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಲು ಜಿಲ್ಲಾಧಿಕಾರಿ ಮನವಿ

    ಮಂಡ್ಯ: ಜಿಲ್ಲೆಯಲ್ಲಿ ಮಾ.3ರಂದು ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ 0 ರಿಂದ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತ ಎರಡನೇ ಸುತ್ತಿನ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 3ರಂದು ಅಭಿಯಾನ ಇರುವುದರಿಂದ ಹಿಂದಿನ ದಿನ ಎಲ್ಲ ಶಾಲೆಗಳಲ್ಲಿ ಜಾಥಾ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ರಾಯಭಾರಿಯನ್ನಾಗಿ ಗುರುತಿಸಿ ಪ್ರಚಾರ ಕಾರ್ಯಕ್ರಮದ ಮುಖಂಡನನ್ನಾಗಿ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
    3ರಂದು ಬೆಳಗ್ಗೆ 8 ಗಂಟೆಗೆ ಲಸಿಕಾ ಕಾರ್ಯಕ್ರಮಕ್ಕಾಗಿ ಎಲ್ಲ ಶಾಲೆಯ ಮುಖ್ಯಸ್ಥರು ಕೊಠಡಿಗಳನ್ನು ತೆರೆದಿಡುವುದರ ಜತೆಗೆ ಲಸಿಕೆ ನೀಡಿಕೆಗಾಗಿ ಸಜ್ಜುಗೊಳಿಸುವ ಹಾಗೂ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಮಾಡಬೇಕು. ತಾಲೂಕು ಪಂಚಾಯಿತಿ ಇಒ ಅಧ್ಯಕ್ಷತೆಯಲ್ಲಿ ತಾಲೂಕುಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅನುಷ್ಠಾನ ಸಮಿತಿ ರಚಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಸ್ಥಳ ಹಾಗೂ ದಿನಾಂಕವನ್ನು ಕರಪತ್ರದಲ್ಲಿ ಮುದ್ರಿಸಿ ವಿತರಿಸಬೇಕು. ಮಾತ್ರವಲ್ಲದೆ ಹೆಚ್ಚು ಪ್ರಚಾರ ಮಾಡಬೇಕು. ಲಸಿಕೆ ಹಾಕುವ ದಿನ ಮಕ್ಕಳನ್ನು ಕರೆತರುವ ವ್ಯವಸ್ಥೆ ಜತೆಗೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ನೀರು ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿಯನ್ನು ಗ್ರಾಪಂ ಕಾರ್ಯದರ್ಶಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
    ಅಂದು ಅಂಗನವಾಡಿ ಕೇಂದ್ರದ ಬಾಗಿಲು ತೆರೆದಿಡಲು ಹಾಗೂ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅವಶ್ಯಕತೆ ಇದ್ದರೆ ಮಕ್ಕಳಿರುವ ಮನೆಗೆ ಹೋಗಿ ಲಸಿಕೆ ಹಾಕಬೇಕು. ಬಾಲ ವಿಕಾಸ ಸಮಿತಿ ಸಭೆ ಆಯೋಜಿಸಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮಹತ್ವದ ಮಾಹಿತಿ ನೀಡುವುದರ ಜತೆಗೆ ಸ್ತ್ರೀ ಶಕ್ತಿ ಗುಂಪುಗಳು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ಮಕ್ಕಳನ್ನು ಕರೆ ತರಬೇಕು. ಸಿಡಿಪಿಒಗಳು ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾಗಿದ್ದು, ಕಾರ್ಯಕ್ರಮದ ಸಮರ್ಪಕ ಅನುಷ್ಠಾನದ ಮೇಲ್ವಿಚಾರಣೆ ವಹಿಸಿಕೊಳ್ಳಬೇಕು. ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಅನಾಥಾಶ್ರಮಗಳಲ್ಲಿರುವ ಮಕ್ಕಳಿಗೂ ಕೂಡ ಲಸಿಕೆ ಹಾಕಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.
    ನಗರಸಭೆ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಲಸಿಕಾ ದಿನದ 2-3 ದಿನಗಳ ಮುಂಚಿತವಾಗಿ ಪ್ರಚಾರ ಮಾಡಿ ಜನಜಾಗೃತಿ ಮೂಡಿಸಬೇಕು. ಪೌರಾಯುಕ್ತರು/ಮುಖ್ಯಾಧಿಕಾರಿಗಳು ಅನುಷ್ಠಾನ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಶೇ.100ರಷ್ಟು ಮಕ್ಕಳು ಲಸಿಕೆ ಪಡೆಯುವಂತೆ ಸೂಕ್ತ ಮೇಲ್ವಿಚಾರಣೆ ಮಾಡಬೇಕು. ಮಹಿಳಾ ಆರೋಗ್ಯ ಸಮಿತಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯು ಮಾಡಬೇಕು ಎಂದರು.
    ಕಾರ್ಮಿಕ ಇಲಾಖೆಯು ತಮ್ಮ ವ್ಯಾಪ್ತಿಯಲ್ಲಿ ಬರುವ ಕಟ್ಟಡ ನಿರ್ಮಾಣ, ಕಬ್ಬು ಕಟಾವು ಮಾಡುವ, ಗಣಿಗಾರಿಕೆ ಕಾರ್ಮಿಕರು, ಜಲ್ಲಿ ಒಡೆಯುವ ಕಾರ್ಮಿಕರ, ಕುರಿ ಕಾಯುವವರು ಹಾಗೂ ಇತರೆ ವಲಸೆ ಪ್ರದೇಶಗಳಲ್ಲಿ ಕೆಲಸ ಮಾಡುವ ಕಾರ್ಮಿಕರ 5 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಿಸುವಂತೆ ಕ್ರಮ ವಹಿಸಬೇಕು. ಸಾರಿಗೆ ಇಲಾಖೆಯಿಂದ ಪೋಲಿಯೋ ಕಾರ್ಯಕ್ರಮಕ್ಕೆ ಬೇಕಾದ ವಾಹನ ಒದಗಿಸಬೇಕು. ವೈದ್ಯಕೀಯ ಶಿಕ್ಷಣ ಇಲಾಖೆ ವೈದ್ಯಕೀಯ, ನರ್ಸಿಂಗ್, ಫಿಜಿಯೋಥೆರಪಿ ಇತರ ವಿದ್ಯಾರ್ಥಿಗಳು/ಸಿಬ್ಬಂದಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಲಸಿಕ ಬೂತ್ ತೆರೆದು ಲಸಿಕೆ ನೀಡಬೇಕು ಎಂದು ತಿಳಿಸಿದರು.
    ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಉಪ ಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಮತ್ತು ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್.ಆಶಾಲತಾ, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts