More

    ಪುದು ಆಗಲಿ ಪಟ್ಟಣ ಪಂಚಾಯಿತಿ, ಇನ್ನೂ ಈಡೇರಿಲ್ಲ ಬಹುಕಾಲದ ಬೇಡಿಕೆ

    ಬಂಟ್ವಾಳ: ಅಭಿವೃದ್ಧಿಪಥದಲ್ಲಿರುವ ಪುದು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಬೇಕೆನ್ನುವ ಬೇಡಿಕೆ ಇನ್ನೂ ಈಡೇರಿಲ್ಲ.
    ಹಲವು ವರ್ಷಗಳಿಂದ ಈ ಪ್ರಸ್ತಾಪ ಸರ್ಕಾರದ ಮುಂದಿದೆಯಾದರೂ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ. ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಈ ವಿಚಾರ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

    33 ಸದಸ್ಯ ಬಲವನ್ನು ಹೊಂದಿರುವ ಪುದು ಗ್ರಾಪಂನ ಜನಸಂಖ್ಯೆ 13 ಸಾವಿರ ದಾಟಿದ್ದು, ಹೀಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಬೇಕು ಎಂಬ ಆಗ್ರಹ ಹಲವು ವರ್ಷಗಳ ಹಿಂದಿನದು. ಕೆಲವೊಂದು ಕಾರಣಕ್ಕೆ ನಗರ ಸ್ಥಳೀಯಾಡಳಿತ ಸಂಸ್ಥೆಯಾಗಿ ಮೇಲ್ದರ್ಜೆಗೇರಿಸುವುದಕ್ಕೆ ವಿರೋಧಗಳು ಕೂಡ ಕೇಳಿ ಬರುತ್ತಿವೆ ಎನ್ನಲಾಗಿದೆ.

    ತಾಲೂಕಿನ ಎಲ್ಲ ಗ್ರಾಪಂಗಳಿಗೆ ಕಳೆದ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿದ್ದರೆ, ಪುದು ಗ್ರಾಪಂಗೆ ಚುನಾವಣೆ ನಡೆದಿರಲಿಲ್ಲ. ಅಂದರೆ ಇಲ್ಲಿ ಈ ಹಿಂದೆ 2018ಕ್ಕೆ ಚುನಾವಣೆ ನಡೆದಿದ್ದು, ಹೀಗಾಗಿ ಹಾಲಿ ಆಡಳಿತ ಮಂಡಳಿಯ ಅವಧಿ 2023ಕ್ಕೆ ಪೂರ್ಣಗೊಳ್ಳುವುದರಿಂದ ಆ ಸಂದರ್ಭ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಬೇಕೆನ್ನುವ ಅಭಿಪ್ರಾಯವೂ ಇದೆ. ಫರಂಗಿಪೇಟೆ ಪುದು ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದು, ಮಂಗಳೂರಿಗೆ ಸನಿಹದ ಪಟ್ಟಣವೂ ಆಗಿದೆ. ಆದಾಯ ಹಾಗೂ ಜನಸಂಖ್ಯೆ ಅನುಗುಣವಾಗಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರುವ ಎಲ್ಲ ಅರ್ಹತೆ ಹೊಂದಿದೆ.

    ಪುದು ಗ್ರಾಪಂ ಬಂಟ್ವಾಳ ತಾಲೂಕಿನಲ್ಲಿದ್ದರೂ ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ಪುದು, ತುಂಬೆ, ಮೇರಮಜಲು ಗ್ರಾಪಂಗಳನ್ನು ಉಳ್ಳಾಲ ತಾಲೂಕಿಗೆ ಸೇರಿಸಲಾಗುತ್ತದೆ ಎಂದು ಹೇಳಿದ್ದರೂ ಬಳಿಕ ಈ ಮೂರನ್ನೂ ಉಳ್ಳಾಲದಿಂದ ಕೈಬಿಡಲಾಗಿತ್ತು. ಮುಂದೆ ಪುದು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೆ ಬಂಟ್ವಾಳ ತಾಲೂಕಿನ ಮೂರನೇ ನಗರ ಸ್ಥಳೀಯಾಡಳಿತ ಸಂಸ್ಥೆ ಎನಿಸಿಕೊಳ್ಳಲಿದೆ.

    ಅಧಿವೇಶನದಲ್ಲಿ ಪ್ರಸ್ತಾಪ: ಫೆಬ್ರವರಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್‌ಕುಮಾರ್ ಅವರು ಪುದು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಲವು ವರ್ಷಗಳಿಂದ ಮೇಲ್ದರ್ಜೆಯ ಪ್ರಸ್ತಾವನೆ ಇದ್ದು, ಸರ್ಕಾರ ಕ್ರಮಕೈಗೊಂಡಿಲ್ಲ ಎಂದು ಗಮನ ಸೆಳೆದಿದ್ದರು. ಇದಕ್ಕೆ ಪೂರಕವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಮತ ವ್ಯಕ್ತಪಡಿಸಿದ್ದರು. ಹೀಗಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳು ಎರಡೂ ಭಾಗಗಳಿಂದಲೂ ಒತ್ತಡ ಇರುವುದರಿಂದ ಶೀಘ್ರದಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುವ ನಿರೀಕ್ಷೆ ಇದೆ.

    ಪುದು ಗ್ರಾಪಂ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಸಂಬಂಧಿಸಿ 2 ತಿಂಗಳ ಹಿಂದೆ ಗ್ರಾಪಂನಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆಯೊಂದನ್ನು ಕಳುಹಿಸಲಾಗಿದೆ. ಆದರೆ ಅಲ್ಲಿಂದ ಯಾವುದೇ ಮರುತ್ತರ ಬಂದಿಲ್ಲ. ಅದು ಸರ್ಕಾರದ ಮಟ್ಟದ ತೀರ್ಮಾನವಾಗಿದೆ.
    – ಹರೀಶ್ ಕೆ.ಎ. ಪುದು ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts