More

    18ಕ್ಕೆ ಪಿಯು ಇಂಗ್ಲಿಷ್ ಪರೀಕ್ಷೆ ; ಕರೊನಾ ಆತಂಕದ ನಡುವೆ ಸಿದ್ಧತೆ

    ತುಮಕೂರು: ಜೂ.18ರಂದು ನಡೆಯಲಿರುವ ದ್ವಿತೀಯ ಪಿಯು ಇಂಗ್ಲಿಷ್ ಭಾಷಾ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪರೀಕ್ಷಾ ತಯಾರಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಕಾರಣಕ್ಕೆ ಮುಂದೂಡಿದ್ದ ಪರೀಕ್ಷೆಯಲ್ಲಿ ಯಾವುದೇ ಲೋಪಗಳಾಗಬಾರದು.

    ಇಂಗ್ಲೀಷ್ ಭಾಷೆಯ ಪರೀಕ್ಷೆ ನಡೆಯದೆ ಬಾಕಿ ಉಳಿದಿತ್ತು. ಸರ್ಕಾರದ ನಿರ್ದೇಶನದಂತೆ ಪರೀಕ್ಷೆ ನಡೆಸಲಾಗುವುದು ಎಂದರು.
    ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ, ಕೊಠಡಿಗೆ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಪರೀಕ್ಷೆ ಬರೆಯಲು ಸುಸ್ಥಿತಿಯಲ್ಲಿರುವ ಮೇಜುಗಳ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು. ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ಬರೆಯಲು ಬರುವ ಎಲ್ಲ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರಿನಿಂಗ್‌ಗೆ ಒಳಪಡಿಸಬೇಕು. ವಿದ್ಯಾರ್ಥಿಗಳು ಸೇರಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದವರೆಲ್ಲರೂ ಮಾಸ್ಕ್ ಧರಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.

    ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿ: ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೊಠಡಿಗಳಲ್ಲಿ ಮಳೆ ನೀರು ಸೋರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಕ್ಕೆ ಒಂದು ಗಂಟೆ ಮುನ್ನ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ಸೂಚನೆ ನೀಡಬೇಕು. ಥರ್ಮಲ್ ಸ್ಕ್ರಿನಿಂಗ್ ಪ್ರಕ್ರಿಯೆಯನ್ನು ಪರಸ್ಪರ ಅಂತರ ಕಾಪಾಡಿಕೊಂಡು ನಡೆಸಬೇಕೆಂದರಲ್ಲದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದು ಎಂದರು.

    ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವಾಗುವಂತೆ ರಸ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ನಗರದ ಎಂಪ್ರೆಸ್ ಶಾಲೆ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಜೂ.18ರಂದು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಡಿಡಿಪಿಯು ಲಲಿತಾಕುಮಾರಿ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಇದ್ದರು.

    24419 ವಿದ್ಯಾರ್ಥಿಗಳ ನೋಂದಣಿ: ಜಿಲ್ಲೆಯಲ್ಲಿ 24419 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಅಲ್ಲದೆ 326 ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದು, 676 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಂದ ಬಂದು ನಮ್ಮ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಾಗಿ ಜಿಲ್ಲೆಯಲ್ಲಿ 34 ಪರೀಕ್ಷಾ ಕೇಂದ್ರಗಳೊಂದಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 22 ಬ್ಲಾಕ್ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. 1500 ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು, ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts