More

    ನಾಡಿದ್ದು ಬಸ್​ ನಂಬಿಕೊಂಡು ಹೊರಗೆ ಹೋಗಬೇಡಿ; ರಾಜ್ಯಾದ್ಯಂತ ಸಂಚಾರ ವ್ಯತ್ಯಯ ಸಾಧ್ಯತೆ

    ಬೆಂಗಳೂರು: ದಿನನಿತ್ಯದ ಓಡಾಟಕ್ಕೆ ಸಮೂಹ ಸಾರಿಗೆಯನ್ನೇ ನಂಬಿಕೊಂಡಿರುವ ಸಾರ್ವಜನಿಕರು, ನಾಡಿದ್ದು ಬಸ್​ಗಳನ್ನು ನಂಬಿಕೊಂಡು ಹೊರಗೆ ಹೊರಡದಿರುವುದು ಒಳಿತು. ಏಕೆಂದರೆ, ಮಂಗಳವಾರ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

    ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರದ ವಿರುದ್ಧ ಜ.24ರಂದು ಸಾರಿಗೆ ನೌಕರರು ನಗರದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ದಿನ ಬಸ್ ಸಂಚಾರ ವ್ಯತ್ಯಯ ಸಾಧ್ಯತೆ ಇದೆ.

    ರಾಜ್ಯ ಸರ್ಕಾರವು 6 ವರ್ಷಗಳೇ ಕಳೆದರೂ ವೇತನ ಹೆಚ್ಚಳ ಮಾಡದಿರುವುದರಿಂದ ಸಿಡಿದೆದ್ದಿರುವ ಸಾರಿಗೆ ನೌಕರರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
    ಈ ಪ್ರತಿಭಟನೆಗೆ ಕೆ.ಎಸ್.ಆರ್.ಟಿ.ಸಿ ಸ್ಟಾಫ್​ ಹಾಗೂ ವರ್ಕರ್ಸ್ ಫೆಡರೇಷನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ಕೆಎಸ್‌ಆರ್‌ಟಿಸಿ ಹಾಗೂ ಎಸ್‌ಸಿ-ಎಸ್‌ಟಿ ಎಂಪ್ಲಾಯೀಸ್ ಯೂನಿಯನ್, ಕರಾರಸಾ ಸಂಸ್ಥೆ ಪರಿಶಿಷ್ಟ ಜಾತಿ-ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಗಳು ಬೆಂಬಲ ನೀಡಿವೆ.

    ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ನಾಲ್ಕು ನಿಗಮದ ವಿಭಾಗೀಯ ಕಚೇರಿ ಮುಂದೆ ಸಾಂಕೇತಿಕವಾಗಿ ಧರಣಿ ಹಾಗೂ ಬಿಎಂಟಿಸಿ ನೌಕರರಿಂದ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದು, ಈ ವೇಳೆ ಸಾವಿರಾರು ನೌಕರರು ಧರಣಿಯಲ್ಲಿ ಭಾಗಿ ಆಗುವುದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ.
    ಈ ಹಿಂದೆ ೧೫ ದಿನ ಮುಷ್ಕರ ನಡೆದಿತ್ತು: ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021ರ ಏಪ್ರಿಲ್‌ನಲ್ಲಿ ನೌಕರರು 15 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಈ ವೇಳೆ ಕೆಲ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೂ ಇಲ್ಲಿಯವರೆಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಹೀಗಾಗಿ ಮತ್ತೆ ಮಂಗಳವಾರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

    ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು 6 ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪಿಸಿಲ್ಲ. ನಿಯಮಬದ್ಧವಾಗಿ 2020ರ ಮಾರ್ಚ್‌ನಲ್ಲಿ ವೇತನ ಪರಿಷ್ಕರಣೆಯಾಗಬೇಕಿತ್ತು. ಹೀಗಾಗಿ ನಿಗಮಗಳ ನಿರ್ಧಾರಕ್ಕೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಸಾರಿಗೆ ನಿಗಮಗಳ 1.2 ಲಕ್ಷ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    2016ರಲ್ಲಿ ಶೇ. 12.5ರಷ್ಟು ವೇತನ ಪರಿಷ್ಕರಣೆ ಆಗಿತ್ತು. ಆದರೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಡೆಸಿ ಒಂದೂವರೆ ವರ್ಷ ಕಳೆದರೂ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಸರ್ಕಾರದ ನಡೆ ಆಕ್ರೋಶಕ್ಕೆ ಕಾರಣವಾಗಿದ್ದು, ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಈ ಹಿಂದೆ ನಡೆದ ಪ್ರತಿಭಟನೆಯಲ್ಲಿ ಸರ್ಕಾರಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿತ್ತು.

    ಗಂಡ-ಹೆಂಡಿರ ಜಗಳ ಚೂರಿ ಇರಿಯುವ ತನಕ; ಟೀ ಕೇಳಿದ್ದಕ್ಕೆ ಪತಿಗೆ ಚಾಕು ಚುಚ್ಚಿದ ಪತ್ನಿ!

    ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts