More

    ಪ್ರಗತಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಹೊಸ ಕಟ್ಟಡ ಕಾಮಗಾರಿ

    ಎಚ್.ಡಿ.ಕೋಟೆ: ಎರಡು ಕೋಟಿ ರೂ.ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಜನರಿಗೆ ಅನುಕೂಲ ಆಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.


    ಪಟ್ಟಣದ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದರು.


    ಆಸ್ಪತ್ರೆಯಲ್ಲಿ 40ಕ್ಕೂ ಹೆಚ್ಚು ದಾದಿಯರ ಕೊರತೆ ಇದೆ. ಮಕ್ಕಳ ತಜ್ಞರು ನಿವೃತ್ತಿಯಾದ ಹಿನ್ನೆಲೆ ಮುಂದಿನ ದಿನಗಳಲ್ಲಿ ಮಕ್ಕಳ ತಜ್ಞರ ನೇಮಕ ಮಾಡಲು ಕ್ರಮ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.


    ತಾಲೂಕಿನಲ್ಲಿ 30ಕ್ಕೂ ಹೆಚ್ಚು ಡಯಾಲಿಸಸ್ ರೋಗಿಗಳು ಇದ್ದಾರೆ. ಇವರ ಡಯಾಲಿಸಿಸ್‌ಗೆ 13.45 ಲಕ್ಷ ರೂ. ವೆಚ್ಚದ ಯಂತ್ರವನ್ನು ದಾನಿಗಳು ನೀಡಿರುವುದನ್ನು ಉದ್ಘಾಟನೆ ಮಾಡಲಾಗಿದ್ದು, ಇನ್ನು ಮುಂದೆ ವಾರದ ಐದು ದಿನಗಳ ಕಾಲ ಡಯಾಲಿಸಿಸ್ ಮಾಡಲಾಗುವುದು ಎಂದರು.


    35 ಲಕ್ಷ ರೂ.ವೆಚ್ಚದ ಲ್ಯಾಬ್ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಉದ್ಘಾಟನೆ ನಡೆಯಲಿದೆ. ತಾಲೂಕಿಗೆ ನರ್ಸಿಂಗ್ ಕಾಲೇಜ್‌ಅನ್ನು ಸ್ಥಾಪಿಸಲು ಮುಂದಿನ ಬಜೆಟ್‌ನಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.


    ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಸೋಮಣ್ಣ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಸ್ಕ್ಯಾನಿಂಗ್ ಮಾಡಲಾಗುತ್ತಿರಲಿಲ್ಲ. ಇದೀಗ ವೈದ್ಯರು ಆಗಮಿಸಿದ್ದು ಸ್ಕ್ಯಾನಿಂಗ್ ಆರಂಭಿಸಲಾಗುತ್ತಿದೆ. ಹಿಂದೆ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಸೆಂಟರ್‌ಗೆ ಕಳುಹಿಸಬೇಕಾದ ಅನಿವಾರ್ಯತೆ ಇತ್ತು. ಈಗ ಅದರ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.


    ಪುರಸಭಾ ಸದಸ್ಯರಾದ ಯಶವಂತ್, ನರಸಿಂಹಮೂರ್ತಿ, ಪುಟ್ಟಬಸವನಾಯಕ, ಶಾಂತಮ್ಮ, ಮಧುಕುಮಾರ್, ಸಾಹಿರಾ ಭಾನು, ಮೈಮುಲ್ ನಿರ್ದೇಶಕ ಈರೇಗೌಡ, ಜಿ.ಪಂ. ಮಾಜಿ ಸದಸ್ಯ ರವಿ, ತಹಸೀಲ್ದಾರ್ ಶ್ರೀನಿವಾಸ್, ಟಿಎಚ್‌ಒ ಟಿ.ರವಿಕುಮಾರ್, ಮುಖ್ಯಾಧಿಕಾರಿ ಸುರೇಶ್, ರಂಗಸ್ವಾಮಿ, ಸಿದ್ದರಾಮು, ಪರಶಿವಮೂರ್ತಿ, ರವಿರಾಜ್, ಮೂರ್ತಿ, ವೈದ್ಯರಾದ ಶ್ರೀನಾಥ್, ತನುಜಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts