More

    ಪಿಎಸ್‌ಐ ಮರುಪರೀಕ್ಷೆ ಕೋರ್ಟ್ ಆದೇಶದ ಬಳಿಕ

    ಹುಬ್ಬಳ್ಳಿ: ಕೋರ್ಟ್ ಆದೇಶದ ಬಳಿಕ ಪಿಎಸ್‌ಐ ಮರು ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಮರು ಪರೀಕ್ಷೆ ನಡೆಸಲು ಈಗಾಗಲೇ ಆದೇಶಿಸಿದ್ದೇವೆ.

    ಕೆಲ ವ್ಯಕ್ತಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿರುವುದರಿಂದ ಆದೇಶ ಬರುವವರೆಗೂ ಪರೀಕ್ಷೆ ನಡೆಸಲು ಬರುವುದಿಲ್ಲ.

    ಮರು ಪರೀಕ್ಷೆಯಾಗುವ ಬಗ್ಗೆ ನನಗೆ ಭರವಸೆ ಇದೆ. ಯಾವ ದಿನ ತೀರ್ಮಾನ ಬರುತ್ತದೆಯೋ ಅಂದು ದಿನಾಂಕ ನಿಗದಿಪಡಿಸಿ ಮರು ಪರೀಕ್ಷೆ ನಡೆಸಲು ಬದ್ಧರಿದ್ದೇವೆ ಎಂದರು.

    ಪೊಲೀಸ್ ಇಲಾಖೆಯ ಯಾವುದೇ ಪರೀಕ್ಷೆಗಳಿದ್ದರೂ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಈ ತಂತ್ರಜ್ಞಾನದ ಹಿಂದೆಯೂ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.

    ಆ ವ್ಯಕ್ತಿ ರಾಜಿಯಾಗಿಬಿಟ್ಟರೆ, ಎಷ್ಟೇ ತಂತ್ರಜ್ಞಾನ ಬಳಸಿದರೂ ಅದು ವಿಫಲವಾಗುತ್ತದೆ.

    ಪಿಎಸ್‌ಐ ಪರೀಕ್ಷೆ ವೇಳೆ ಯಾರು ರಾಜಿಯಾಗಿದ್ದಾರೋ ಅವರೆಲ್ಲ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಕ್ರಮವೂ ಆಗಲಿದೆ ಎಂದು ಭರವಸೆ ನೀಡಿದರು.

    ಸೈಬರ್ ಕ್ರೈಂ ಪ್ರಕರಣ ಪತ್ತೆ ಹಚ್ಚುವಲ್ಲಿ ಶೇ. 5ರಷ್ಟು ಸಾಧನೆ ಇದೆ. ಇವೆಲ್ಲ ಗಡಿ ಮೀರಿದ ಪ್ರಕರಣಗಳು.

    ಅಮೆರಿಕ, ಆಫ್ರಿಕಾ ಸೇರಿದಂತೆ ಇತರೆಡೆ ಕುಳಿತು ಸೈಬರ್ ಕ್ರೈಂ ಮಾಡಬಹುದು. ಪ್ರಕರಣ ಭೇದಿಸಿದಾಗ ರಿಕವರಿಯಾದ ಮೊತ್ತಕ್ಕೂ ನಾವು ಸ್ಥಳಕ್ಕೆ ಹೋಗಿ ತನಿಖೆ ಮಾಡಲು ಆದ ವೆಚ್ಚಕ್ಕೂ ಬಹಳಷ್ಟು ವ್ಯತ್ಯಾಸವಿದೆ.

    ಮುಖ ರಹಿತ ಕ್ರೈಂ ಇರುವುದರಿಂದ ನಮಗೆ ಕಂಪ್ಯೂಟರ್ ಮಾತ್ರ ದೊರೆಯುತ್ತದೆ.

    ಹೀಗಾಗಿ ಈ ವಿಚಾರದಲ್ಲಿ ಜನರಲ್ಲಿ ಜಾಗೃತಿ ಅಗತ್ಯ. ಇದು ರಾಜ್ಯದ ಸಮಸ್ಯೆಯಲ್ಲ, ಇಡೀ ದೇಶದ ಸಮಸ್ಯೆ. ಸೈಬರ್ ಕ್ರೈಂನಲ್ಲಿ ಗೋಲ್ಡನ್ ಹಾವರ್ ಎಂದರೆ 1930 ಸಂಖ್ಯೆ. ಇದಕ್ಕೆ ಕರೆ ಮಾಡಿದರೆ ಪ್ರಕರಣ ನಡೆದ ಒಂದು ಗಂಟೆಯೊಳಗೆ ಬ್ಯಾಂಕ್ ಖಾತೆ ಬಂದ್ ಮಾಡಲು ಸಹಾಯವಾಗುತ್ತದೆ ಎಂದರು.

    ವರ್ಷದಲ್ಲಿ 4-5 ಪೊಲೀಸ್ ಠಾಣೆಗಳನ್ನು ಹೊಸದಾಗಿ ತೆರೆಯುತ್ತೇವೆ. ರಾಜ್ಯದಲ್ಲಿ ಹಂತ ಹಂತವಾಗಿ ಇನ್ನಷ್ಟು ಪೊಲೀಸ್ ಠಾಣೆಗಳನ್ನು ತೆರೆಯಲಾಗುವುದು.

    ಚುನಾವಣೆ ನಿರ್ವಹಣೆ, ಬಂದೋಬಸ್ತ್ ಬಗ್ಗೆ ಸಭೆ ನಡೆಸಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts