More

    ಮತಗಟ್ಟೆಗೆ ಮೂಲ ಸೌಕರ್ಯ ಕಲ್ಪಿಸಿ; ಅಧಿಕಾರಿಗಳಿಗೆ ಡಿಸಿ ವೈ.ಎಸ್.ಪಾಟೀಲ ಸೂಚನೆ 

    ತುಮಕೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ಪೀಠೋಪಕರಣ, ವಿದ್ಯುತ್ ಸರಬರಾಜು, ರ‌್ಯಾಂಪ್ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ಮತದಾರರು ಮತದಾನ ಮಾಡಲು ಅನುವಾಗುವಂತೆ ಮತಗಟ್ಟೆಗಳಲ್ಲಿ ಮೂಲ ಸೌಲಭ್ಯ ಇಲ್ಲದಿದಲ್ಲಿ ಕೂಡಲೇ ಒದಗಿಸಬೇಕು ಎಂದರು.

    ಮುಂದಿನ ಒಂದು ವಾರದೊಳಗೆ ಈ ಬಗ್ಗೆ ನಿಖರ ಮಾಹಿತಿ ನೀಡಬೇಕು, ಮತಗಟ್ಟೆಗಳಿಗೆ ಮೂಲ ಸೌಲಭ್ಯ ಒದಗಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದರು. ಮತಗಟ್ಟೆಗಳು ಶಾಲೆಗಳಲ್ಲಿ
    ಸ್ಥಾಪನೆಯಾಗಿದ್ದರೆ ತಹಸೀಲ್ದಾರರು ಸೂಚಿಸುವ ಕೋಣೆಯನ್ನು ಮತದಾನಕ್ಕೆ ಬಿಟ್ಟುಕೊಡುವ ಬಗ್ಗೆ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

    ಮತಪಟ್ಟಿಗೆ ಹೆಸರು ಸೇರ್ಪಡೆ, ತೆಗೆದು ಹಾಕುವ ಬಗ್ಗೆ ಸ್ವೀಕೃತ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದರು. ತಹಸೀಲ್ದಾರ್ ಸಿದ್ದೇಶ್, ಡಿಎಚ್‌ಒ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ, ಜಿಪಂ ಉಪಕಾರ್ಯದರ್ಶಿ ಅತಿಕ್‌ಪಾಷ ಇದ್ದರು.

    36000 ಮತದಾರರು ಸೇರ್ಪಡೆ: ಜಿಲ್ಲಾಡಳಿತದಲ್ಲಿ ಲಭ್ಯವಿರುವ ಅಂಕಿ, ಅಂಶದಂತೆ ಜಿಲ್ಲೆಯಲ್ಲಿ ಸುಮಾರು 43000 ಯುವ ಮತದಾರರಿದ್ದರೂ ಈವರೆಗೆ 36000 ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇನ್ನುಳಿದ ಯುವ ಮತದಾರರನ್ನು ಹುಡುಕಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜಿಲ್ಲಾಡಳಿತ ಮುಂದಾಗಿದ್ದು ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ,

    560 ಪ್ರಕರಣ ಬಾಕಿ: ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯ ಜಮೀನುಗಳನ್ನು ಶಾಲೆಯ ಹೆಸರಿಗೆ ನೋಂದಣಿ, ಇ-ಸ್ವತ್ತು ಮಾಡಿಕೊಂಡು ತಹಸೀಲ್ದಾರ್ ಹಂತದಲ್ಲಿ 296 ಹಾಗೂ ತಾಪಂ ಇಒ ಹಂತದಲ್ಲಿ 264 ಸೇರಿ 560 ಪ್ರಕರಣಗಳು ಬಾಕಿ ಇದ್ದು, ಕೂಡಲೇ ಬಾಕಿ ಪ್ರಕರಣ ವಿಲೇವಾರಿ ಮಾಡಬೇಕು ಎಂದು ಡಿಸಿ ತಾಕೀತು ಮಾಡಿದರು. ಸ್ಮಶಾನ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಆಯಾ ಗ್ರಾಪಂ ಪಿಡಿಒಗಳು ಭೌತಿಕವಾಗಿ ಪಂಚಾಯತಿ ವಶಕ್ಕೆ ಪಡೆದುಕೊಳ್ಳಬೇಕು ಎಂದು ಡಿಸಿ ಹೇಳಿದರು.

    ಲೋಪ ಸರಿಪಡಿಸಲು ಸೂಚನೆ: ಮೊಬೈಲ್ ಆ್ಯಪ್ ಮೂಲಕ ಖಾಸಗಿ ಪ್ರತಿನಿಧಿಗಳು ಕೈಗೊಂಡಿದ್ದ ಬೆಳೆ ಸಮೀಕ್ಷೆಯಲ್ಲಿ ಬಹುವಾರ್ಷಿಕ ಬೆಳೆ ವಿವರ ದಾಖಲಿಸುವಲ್ಲಿ ಹಲವು ಲೋಪಗಳು ಕಂಡು ಬಂದಿರುವುದರಿಂದ ಸದರಿ ಲೋಪಗಳನ್ನು ಸರಿಪಡಿಸಲು ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಿಯೋಜಿತ ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ಹಿಂದಿನ ಮೂರು ವರ್ಷಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಎಲ್ಲ
    ಬಹುವಾರ್ಷಿಕ ಬೆಳೆಗಳ ತಾಕುಗಳನ್ನು ಪರಿಶೀಲಿಸಿ ದೃಢೀಕರಿಸಬೇಕೆಂದು ಡಿಸಿ ಸೂಚಿಸಿದರು.

    2018 ಹಾಗೂ 2019ರ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಬೇಕು.
    ಮತಪಟ್ಟಿಯಲ್ಲಿ ಅರ್ಹರ ಹೆಸರು ಇರುವಂತೆ ನೋಡಿಕೊಳ್ಳಬೇಕು. ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅರ್ಹ ಮತದಾರರ ವಾಟ್ಸಪ್ ಗ್ರೂಪ್ ರಚಿಸಿ ಚುನಾವಣೆ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಬೇಕು.
    |ಡಾ.ಕೆ.ವಿದ್ಯಾಕುಮಾರಿ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts