More

    ಇಂದು ಸಂಜೆಯೊಳಗೆ ತುರ್ತು ಪರಿಹಾರ ನೀಡಿ

    ಹಾವೇರಿ: ಅತಿವೃಷ್ಟಿ ಹಾಗೂ ನೆರೆಹಾವಳಿಯಿಂದ ಹಾನಿಯಾದ ಮನೆಗಳ ಹಾಗೂ ಬೆಳೆ ಸಮೀಕ್ಷೆಯಲ್ಲಿ ಕಳೆದ ವರ್ಷದಂತೆ ತಪ್ಪು ಪುನರಾವರ್ತನೆಯಾಗಬಾರದು. ಸಮೀಕ್ಷೆಯಲ್ಲಿ ತಪ್ಪೆಸಗುವ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಸಿದರು.

    ಸೋಮವಾರ ಮಳೆ ಹಾಗೂ ನೆರೆ ಹಾವಳಿ ಪರಿಹಾರ ಕ್ರಮಗಳ ಕುರಿತು ತಾಲೂಕು ಆಡಳಿತದೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಅವರು, ಮನೆ ಹಾನಿಗೆ ಒಳಗಾದ ಕುಟುಂಬಗಳಿಗೆ ಎನ್​ಡಿಆರ್​ಎಫ್ ಮಾರ್ಗಸೂಚಿ ಪ್ರಕಾರ 48 ತಾಸಿನೊಳಗಾಗಿ ತುರ್ತು ಪರಿಹಾರವಾಗಿ 3,800 ರೂ.ಗಳನ್ನು ನೀಡಬೇಕು. ಮಂಗಳವಾರ ಸಂಜೆಯೊಳಗೆ ತುರ್ತು ಪರಿಹಾರ ಪಾವತಿಸಬೇಕು ಎಂದು ತಾಲೂಕು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಮನೆ ಹಾನಿ ಸಮೀಕ್ಷೆಗಾಗಿ ರಚಿಸಲಾದ ತ್ರಿಸದಸ್ಯ ಸಮಿತಿ ಖುದ್ದಾಗಿ ಹಾನಿ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ನಿಖರವಾದ ಮಾಹಿತಿ ಸಂಗ್ರಹಿಸಿ ದೃಢೀಕರಿಸಬೇಕು. ಪಿಡಿಒ, ಪಂಚಾಯತ್ ಇಂಜಿನಿಯರ್ ಹಾಗೂ ಗ್ರಾಮಲೆಕ್ಕಾಧಿಕಾರಿ ಪರಿಶೀಲಿಸಿ ದೃಢೀಕರಿಸಬೇಕು. ತಾಪಂ ಇಒ ಮಾಹಿತಿ ಸಂಗ್ರಹಿಸಿ ತಹಸೀಲ್ದಾರ್​ಗಳಿಗೆ ಸಲ್ಲಿಸಿದ ತಕ್ಷಣ ನೇರ ವರ್ಗಾವಣೆ ಮೂಲಕ ಪರಿಹಾರ ಪಾವತಿಗೆ ಕ್ರಮವಹಿಸಬೇಕು. ಸೇರ್ಪಡೆ, ಮಾರ್ಪಾಡು ಸೇರಿದಂತೆ ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ ನಿಶ್ಚಿತ ಎಂದರು.

    ನೆರೆ ಹಾಗೂ ಅತಿವೃಷ್ಟಿಯಿಂದ ಸಂಪೂರ್ಣ ಹಾಗೂ ಭಾಗಶಃ ಮನೆ ಹಾನಿಗೆ 95,500 ರೂ., ಅಲ್ಪಸ್ವಲ್ಪ ಮನೆ ಹಾನಿಗೆ 5,200 ರೂ. ಪರಿಹಾರಕ್ಕೆ ಅವಕಾಶವಿದೆ. ತುರ್ತು ಪರಿಹಾರವಾಗಿ ಪಾತ್ರೆ ಹಾಗೂ ಬಟ್ಟೆ ಖರೀದಿಗಾಗಿ 3,800 ರೂ, ನೀಡಲು ಅವಕಾಶವಿದೆ. ಬೆಳೆ ಹಾನಿಗೆ ಮಳೆಯಾಶ್ರಿತ ಜಮೀನುಗಳಿಗೆ 6,800 ರೂ, ನೀರಾವರಿ ಜಮೀನಿಗೆ 13,500 ರೂ, ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್​ಗೆ 18 ಸಾವಿರ ರೂ. ಪರಿಹಾರ ನೀಡಲು ಅವಕಾಶವಿದೆ ಎಂದರು.

    ಸಿಇಒ ಮಹಮ್ಮದ ರೋಷನ್, ಎಡಿಸಿ ಎಸ್. ಯೋಗೇಶ್ವರ, ಎಸಿ ಶಿವಾನಂದ ಉಳ್ಳಾಗಡ್ಡಿ, ಕೃಷಿ ಇಲಾಖೆ ಉಪನಿರ್ದೇಶಕ ಡಿ.ಕೆ. ಕರಿಯಲ್ಲಪ್ಪ, ತೋಟಗಾರಿಕೆ ಉಪನಿರ್ದೇಶಕ ಎಲ್. ಪ್ರದೀಪ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ರಾಜೀವ ಕೂಲೇರ, ತಹಸೀಲ್ದಾರ್ ಗಿರೀಶ ಸ್ವಾದಿ ಇತರರಿದ್ದರು.

    24 ತಾಸಿನಲ್ಲಿ ಬಿದ್ದ ಮನೆಗಳನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಸವಣೂರ ತಾಲೂಕು ಕುರುಬರಮಲ್ಲೂರ ಗ್ರಾಮದಲ್ಲಿ ಮನೆ ಬಿದ್ದು ನಾಲ್ಕೈದು ದಿನಗಳಾದರೂ ಯಾವೊಬ್ಬ ಅಧಿಕಾರಿಗಳೂ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಕಳೆದ ವರ್ಷವೂ ಅಧಿಕಾರಿಗಳ ಅಸಡ್ಡೆಯಿಂದ ಮನೆ ಕಳೆದುಕೊಂಡ ಅನೇಕರಿಗೆ ಸರ್ಕಾರದಿಂದ ಬರುವ ಪರಿಹಾರವೂ ಸಿಕ್ಕಿಲ್ಲ. ಗ್ರಾಮ ಲೆಕ್ಕಾಧಿಕಾರಿ ಕಳೆದ ಒಂದು ತಿಂಗಳಿನಿಂದ ಗ್ರಾಮಕ್ಕೆ ಬರುತ್ತಿಲ್ಲ. ಪಿಡಿಒ ಕಳೆದ ನಾಲ್ಕು ದಿನಗಳಿಂದ ಗ್ರಾಮಕ್ಕೆ ಬಂದಿಲ್ಲ.

    | ಅನಿಲಕುಮಾರ ಹೊಂಬಳದ, ಕುರುಬರಮಲ್ಲೂರ ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts