More

    ನಾಲೆಗೆ ನೀರು ಹರಿಸುವಂತೆ ಪ್ರತಿಭಟನೆ

    ಶ್ರೀರಂಗಪಟ್ಟಣ: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸುವ ಜತೆಗೆ ಅಂತರ್ಜಲ ಮಟ್ಟವನ್ನು ವೃದ್ಧಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಜಮಾವಣೆಗೊಂಡ ರೈತ ಸಂಘ, ದಸಂಸ ಹಾಗೂ ವಿವಿಧ ಕನ್ನಡ ಪರ ಹೋರಾಟಗಾರರು, ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಹಾಗೂ ದಲಿತ ಮುಖಂಡ ಪಾಂಡು ಮಾತನಾಡಿ, ಕನ್ನಂಬಾಡಿ ಜಲಾಶಯದಲ್ಲಿ 91 ಅಡಿಗಳಷ್ಟು ನೀರು ಇದೆ. ಆದರೂ ಕುಡಿಯುವ ನೀರಿನ ನೆಪವೊಡ್ಡಿ ಕಾವೇರಿ ಕೊಳ್ಳದ ಕೃಷಿ ಭೂಮಿಗಳಿಗೆ ವಿರಿಜಾ, ಸಿಡಿಎಸ್ ಹಾಗೂ ವಿ.ಸಿ. ನಾಲೆಗಳ ಮೂಲಕ ನೀರು ಹರಿಸುತ್ತಿಲ್ಲ. ಇದರ ಪರಿಣಾಮವಾಗಿ ಈ ಭಾಗದ ಬೆಳೆಗಳು ಒಣಗುತ್ತಿವೆ. ಈ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿದು ಪಾತಾಳ ಸೇರಿದೆ. ಜನ-ಜಾನುವಾರುಗಳ ಪರಿಸ್ಥಿತಿ ಕೈ ಮೀರುತ್ತಿದೆ. ರೈತರು ಜಾನುವಾರುಗಳನ್ನು ಮಾರಿ ಗುಳೆ ಹೊರಟಿದ್ದಾರೆ. ಸತತ 15 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಅನಾಹುತ ಉಂಟಾಗಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ದನಿ ಎತ್ತಬೇಕು ಎಂದು ಆಗ್ರಹಿಸಿದರು.

    ಸ್ಥಳಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಆಗಮಿಸಿ, ಪ್ರತಿಭಟನಾಕಾರರ ಮನವಿ ಆಲಿಸಿ ಮಾತನಾಡಿ, ಕಾವೇರಿ ಕಣಿವೆಯ ನಾಲೆಗಳಿಗೆ ನೀರು ಹರಿಸುವ ಸಂಬಂಧ ತಕ್ಷಣ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅವರ ಗಮನ ಸೆಳೆದು ಶೀಘ್ರ ಈ ಬಗ್ಗೆ ಕ್ರಮವಹಿಸುವುದಾಗಿ ಭರವಸೆಯನ್ನು ನೀಡಿದರು. ಬಳಿಕ ಪ್ರತಿಭಟನಕಾರರು ಗ್ರೇಡ್-2 ತಹಸೀಲ್ದಾರ್ ಆದರ್ಶ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸರ್ವೋದಯ ಕರ್ನಾಟಕ ಪಕ್ಷದ ಮುಖ್ಯಸ್ಥ ಪ್ರಸನ್ನಗೌಡ, ಮುಖಂಡರಾದ ಕಡತನಾಳು ಬಾಲಕೃಷ್ಣ, ರೈತ ಸಂಘದ ಕಾರ್ಯದರ್ಶಿ ಶ್ರೀನಿವಾಸ ಅಗ್ರಹಾರ ಶಂಕರೇಗೌಡ, ಬಿ.ಎಸ್.ರಮೇಶ್, ಪುರುಷೋತ್ತಮ್, ಡಿ.ಎಂ.ಕೃಷ್ಣೇಗೌಡ, ಅಂಬೇಡ್ಕರ್ ಒಕ್ಕೂಟಗಳ ಅಧ್ಯಕ್ಷ ಗಂಜಾಂ ರವಿಚಂದ್ರು, ಕರುನಾಡ ವೇದಿಕೆ ಅಧ್ಯಕ್ಷೆ ಪ್ರಿಯಾ ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts