More

    ಸಾರಿಗೆ ನೌಕರರ ಕುಟುಂಬಸ್ಥರ ಪ್ರತಿಭಟನೆ

    ಲಕ್ಷ್ಮೇಶ್ವರ: ಸಾರಿಗೆ ನೌಕರರ ವರ್ಗಾವಣೆ, ಬಸ್​ಗಳು ರಸ್ತೆಗಳಿದಿದ್ದನ್ನು ಖಂಡಿಸಿ ಹಾಗೂ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಕುಟುಂಬಸ್ಥರು ಪಟ್ಟಣದಲ್ಲಿ ಮಕ್ಕಳೊಡನೆ ಭಾನುವಾರ ಪ್ರತಿಭಟನೆ ನಡೆಸಿದರು.

    ಮುಷ್ಕರ 5ನೇ ದಿನ ಪೂರೈಸಿದರೂ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರ, ಅಧಿಕಾರಿಗಳು ಮತ್ತು ಮುಷ್ಕರದಿಂದ ಹೊರಗಿರುವ ಸಿಬ್ಬಂದಿ ಬಳಸಿ ಬಸ್ ಸಂಚಾರ ಪ್ರಾರಂಭಿಸುತ್ತಿದೆ. ಇದರಿಂದ ಅಸಮಾಧಾನಗೊಂಡ ಲಕ್ಷ್ಮೇಶ್ವರ ಡಿಪೋ ನೌಕಕರ ಕುಟುಂಬಸ್ಥರು ಮಕ್ಕಳೊಡಗೂಡಿ ಬಸ್ ನಿಲ್ದಾಣಕ್ಕೆ ಆಗಮಿಸಿ ಸರ್ಕಾರದ ವಿರುದ್ಧ ಹರಿಹಾಯ್ದರು. ಗದಗದಿಂದ ಆಗಮಿಸಿದ ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ತಡೆಯಲು ಪ್ರಯತ್ನಿಸಿದರು. ಆಗ ಪಿಎಸ್​ಐ ಶಿವಯೋಗಿ ಲೋಹಾರ, ಡಿಪೋ ಮ್ಯಾನೇಜರ್ ಅಶೋಕ ವೆರ್ಣೆಕರ ಅವರು, ‘ಈ ರೀತಿ ಬಸ್ ತಡೆದು ಪ್ರತಿಭಟನೆ ಮಾಡುವುದು, ಹೆಚ್ಚು ಜನ ಸೇರುವುದು ಕಾನೂನುಬಾಹಿರ. ಇದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಇದಕ್ಕೆ ಅವಕಾಶ ಕಲ್ಪಿಸುವುದಿಲ್ಲ. ನಿಮ್ಮ ಬೇಡಿಕೆಗಳ ಮನವಿ ಸಲ್ಲಿಸಿ. ಅಧಿಕಾರಿಗಳಿಗೆ ತಲುಪಿಸುತ್ತೇವೆ’ ಎಂದು ಹೇಳಿ ಕಳುಹಿಸಿದರು.

    ಸರ್ಕಾರ, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಕುಟುಂಬಸ್ಥರು, ಹೋರಾಟ ಹತ್ತಿಕ್ಕಲು, ಮಾನಸಿಕವಾಗಿ ಕುಗ್ಗಿಸಲು ವರ್ಗಾವಣೆ ಮಾಡಿ ಬೆದರಿಕೆ ಹಾಕುತ್ತಿರುವುದು ಖಂಡನೀಯ. ಕಡಿಮೆ ಸಂಬಳದಲ್ಲಿ ಹಬ್ಬ-ಹರಿದಿನ ಹಗಲು-ರಾತ್ರಿ ದುಡಿದರೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಮಕ್ಕಳೊಂದಿಗೆ ಸೇರಿ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಆರ್.ಬಿ. ಕರಿಬಸಣ್ಣವರ, ಎಂ.ಎಫ್. ಖಾದರನವರ, ಎನ್.ಎಸ್. ಹಳ್ಳಿಕೇರಿ, ಬಿ.ಎ. ಚೌರಿ, ಸಿ.ಬಿ. ಸವಣೂರ, ಶೈಲಾ ಎಂ. ತೋಟದ, ಪವಿತ್ರಾ ಬಸಾಪುರ, ನಿರ್ಮಲಾ ಶೆಟ್ಟರ್, ವಿ.ಎಸ್. ನಂದರಕಿ, ಆರ್.ಎಸ್. ಕರಿಗೌಡ್ರ, ರೇಖಾ ಎನ್. ಉಪ್ಪಾರ, ಬಿ.ಎಸ್. ಗದಗ, ಎಸ್.ಆರ್. ಕೆಂಗೇರ, ಶಾರದಾ ನಡುವಿನಕೇರಿ, ಎನ್.ಎಸ್. ಗುಡಗೇರಿ, ಜೆ.ಹೆ. ಕೋಲಾರ ಇತರರಿದ್ದರು.

    ಅರ್ಧಕ್ಕಿಂತ ಹೆಚ್ಚು ಸಿಬ್ಬಂದಿ ಹಾಜರು: ಮುಂಡರಗಿ ಪಟ್ಟಣದ ಕೆಎಸ್​ಆರ್​ಟಿಸಿ ಘಟಕದ ಅರ್ಧಕ್ಕಿಂತ ಹೆಚ್ಚು ನೌಕರರು ಸ್ವಇಚ್ಛೆಯಿಂದ ಭಾನುವಾರ ಕರ್ತವ್ಯಕ್ಕೆ ಹಾಜರಾಗಿದ್ದು, ಬಸ್ ಸಂಚಾರ ಆರಂಭವಾಗಿವೆ. ಇದರಿಂದ ಪ್ರಯಾಣಿಕರ ಪರದಾಟ ತಪ್ಪಿದಂತಾಯಿತು. ಸ್ಥಳೀಯ ಘಟಕದ 50 ಬಸ್​ಗಳ ಸಂಚಾರ ಆರಂಭವಾಗಿದ್ದು, ಚಾಲಕರು, ನಿರ್ವಾಹಕರು ಸೇರಿ 100 ಸಿಬ್ಬಂದಿ, 29 ತಾಂತ್ರಿಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಗದಗ, ಕೊಪ್ಪಳ, ಶಿರಹಟ್ಟಿ, ಗ್ರಾಮೀಣ ಭಾಗಗಳು ಸೇರಿ ಮೊದಲಾದೆಡೆ ಎಂದಿನಂತೆ ಬಸ್​ಗಳು ಸಂಚರಿಸಿದವು. ಡಿಪೋ ವ್ಯವಸ್ಥಾಪಕ ವಿಜಯಕುಮಾರ ಕುಮಟಳ್ಳಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್​ಗಳ ಸಂಚಾರ ಪರಿಶೀಲಿಸಿ ಮಾಹಿತಿ ಪಡೆದರು.

    ಜನ ಸಂಚಾರ ಕಡಿಮೆ: ಸರ್ಕಾರ ಕೈಗೊಳ್ಳುತ್ತಿರುವ ಬಿಗಿ ಕ್ರಮದಿಂದ ಭಯಗೊಂಡ ಕೆಲ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇದರಿಂದ ಗದಗ ಜಿಲ್ಲೆಯ ತಾಲೂಕು ಕೇಂದ್ರ, ಹುಬ್ಬಳ್ಳಿಗೆ ಬಸ್ ಓಡಿಸಲಾಗುತ್ತಿದೆ. ಇದರ ಜತೆಗೆ ಖಾಸಗಿ ವಾಹನಗಳೂ ಬಸ್ ನಿಲ್ದಾಣದಿಂದಲೇ ಸಂಚಾರ ಆರಂಭಿಸಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿಲ್ಲ. ಭಾನುವಾರ ಜನರ ಸಂಚಾರ ಕಡಿಮೆ ಇತ್ತು. ಜತೆಗೆ ಸಾರಿಗೆ ನೌಕರರ ಮುಷ್ಕರ ಇರುವುದರಿಂದ ಜನರು ಖಾಸಗಿ ಬಸ್​ಗಳ ಮೂಲಕ ಸಂಚಾರ ಆರಂಭಿಸಿದ್ದಾರೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಸ್ಥಿತಿಯಲ್ಲಿಲ್ಲ. ಮನೆಯಲ್ಲಿ ಕುಳಿತು ಏನು ಮಾಡಬೇಕೆಂದು ತಿಳಿಯದಾಗಿದೆ. ಸರಿಯೋ, ತಪ್ಪೋ ಗೊತ್ತಿಲ್ಲ. ಕೆಲಸಕ್ಕೆ ಹಾಜರಾಗಿದ್ದೇನೆಂದು ಹೆಸರು ಹೇಳಲಿಚ್ಛಿಸದ ಸಾರಿಗೆ ಬಸ್ ಚಾಲಕರೊಬ್ಬರು ಹೇಳಿದರು. ಸಾರಿಗೆ ಆಧಿಕಾರಿಗಳು ನೌಕರರಿಗೆ ಮೊಬೈಲ್ ಫೋನ್ ಕರೆ ಮಾಡಿ ಕೆಲಸಕ್ಕೆ ಹಾಜರಾಗಬೇಕೆಂದು ಮನವೊಲಿಸುವ ಕಾರ್ಯ ಮುಂದುವರಿಸಿದ್ದಾರೆ. 5 ದಿನಗಳಿಂದ ನಡೆದಿರುವ ಮುಷ್ಕರದಿಂದ 2.5 ಕೋಟಿ ರೂಪಾಯಿ ನಷ್ಟವುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts