More

    ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ

    ನರಗುಂದ: ಗರ್ಭಿಣಿಯರು, ಬಾಣಂತಿಯರು ಹಾಗೂ ಅಂಗನವಾಡಿ ಮಕ್ಕಳಿಗೆ ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಆಹಾರ ಸಾಮಗ್ರಿ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಜನತಾ ಪ್ಲಾಟ್​ನ ಕೃಷ್ಣ ನಗರದ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು ಅಲ್ಲಿನ ಸಾರ್ವಜನಿಕರು ಗುರುವಾರ ಪ್ರತಿಭಟನೆ ನಡೆಸಿದರು.

    ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸರಿಯಾಗಿ ಆಹಾರ ವಿತರಣೆ ಮಾಡುವುದಿಲ್ಲ. ವಿತರಣೆ ಮಾಡುವಾಗ ತಾರತಮ್ಯ ನೀತಿ ಅನುಸರಿಸುತ್ತಾರೆ. ಪ್ರಮಾಣಕ್ಕೆ ಅನುಗುಣವಾಗಿ ಆಹಾರ ಸಾಮಗ್ರಿ ವಿತರಿಸುವುದಿಲ್ಲ. ಕಳೆದ ಮೂರು ತಿಂಗಳಿನಿಂದ ಆಹಾರ ಸಾಮಗ್ರಿ ಕೊಡುವುದನ್ನೇ ನಿಲ್ಲಿಸಿದ್ದಾರೆ. ಈಗ ನವೆಂಬರ್ ತಿಂಗಳು ನಡೆಯುತ್ತಿದ್ದರೂ, ಆಗಸ್ಟ್ ತಿಂಗಳ ಆಹಾರ ಸಾಮಗ್ರಿ ವಿತರಣೆ ನಡೆದಿದೆ ಎಂದು ಆರೋಪಿಸಿದರು.

    ಈ ಕೇಂದ್ರದಲ್ಲಿ ಮೊಟ್ಟೆ ವಿತರಿಸಲಾಗುತ್ತಿಲ್ಲ. ನೀಡುವ ಸಾಮಗ್ರಿಗಳೇ ಬೇರೇ, ದಾಖಲೆಗಳಲ್ಲಿ ಇರುವುದೇ ಬೇರೆ ಎಂದು ಆರೋಪಿಸಿದರು. ಇದನ್ನು ಸರಿಪಡಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಗರ್ಭಣಿಯರು ಹಾಗೂ ಅಂಗನವಾಡಿ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

    ಅಂಗನವಾಡಿ ಕಾರ್ಯಕರ್ತೆ ಪಿ.ಕೆ. ಮುತ್ತಣ್ಣವರ ಮಾತನಾಡಿ, ‘ಮಹಿಳೆಯರು ಮಾಡುವ ಆರೋಪ ನಿರಾಧಾರವಾಗಿದೆ. ನಾನು ಸರಿಯಾಗಿ ಆಹಾರ ವಿತರಣೆ ಮಾಡಿದ್ದೇನೆ’ ಎಂದರು. ಆದರೆ, ಇದನ್ನು ಒಪ್ಪದ ಪ್ರತಿಭಟನಾಕಾರರು ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರ ಸ್ಥಳದಲ್ಲಿ ಬೇರೆಯವರನ್ನು ನಿಯೋಜಿಸುವಂತೆ ಆಗ್ರಹಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ ಮೇಲ್ವಿಚಾರಕಿ ಜಯಶ್ರೀ ಅಂಗಡಿ, ಪ್ರತಿಭಟನಾಕಾರರ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

    ಕಲಾವತಿ ಕಿಲ್ಲೆದಾರ, ರಾಜಬೀ ಕಿಲ್ಲೆದಾರ, ಅಮೃತಾ ಜೋಗತಿ, ಸಾವಿತ್ರವ್ವ ಹವಾಲ್ದಾರ, ಶಮಶಾದಬಿ ನದಾಫ್, ಲಕ್ಷ್ಮಿ ತೊಂಡಲೆ, ನಾಗವ್ವ ಪವಾರ, ಇಬ್ರಾಹಿಂ ಕಡಬಿ, ಸವಿತಾ ಸೆಳಕೆ, ವಿಜಯಲಕ್ಷ್ಮಿ ನರಗುಂದ, ವಿಜಯಲಕ್ಷ್ಮೀ ಗುರಪ್ಪಗೌಡ್ರ ಹಾಗೂ ಜನತಾ ಪ್ಲಾಟ್​ನ ನಿವಾಸಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts