More

    ಬೀದಿಗಿಳಿದ ಬಿಸಿಯೂಟ ನೌಕರರಿಂದ ಪ್ರತಿಭಟನೆ

    ಶಿವಮೊಗ್ಗ: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡುತ್ತಿರುವ ಅನುದಾನವನ್ನು ಸರ್ಕಾರ ಹೆಚ್ಚಳ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದನ್ನು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಕಡಿಮೆ ಗೌರವಧನದ ಮೂಲಕ ಬಿಸಿಯೂಟ ನೌಕರರನ್ನು, ಆಶಾ ಕಾರ್ಯಕರ್ತೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಹಲವು ವರ್ಷಗಳಾದರೂ ಗೌರವಧನ ಹೆಚ್ಚಳವಾಗಿಲ್ಲ. ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಮಾತನಾಡುತ್ತದೆ. ಆದರೆ ನಮ್ಮ ವಿಷಯದಲ್ಲಿ ಮೌನ ತಾಳಿದೆ ಎಂದು ದೂರಿದರು.
    ಕಾರ್ಪೊರೇಟ್ ಕಂಪನಿಗಳ 14.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆದರೆ ನಮ್ಮ ಗೌರವಧನ ಹೆಚ್ಚಳಕ್ಕೆ ಮುಂದಾಗಿಲ್ಲ. ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ನಮಗೆ ಎಲ್ಲ ಸೌಲಭ್ಯ ನೀಡಬೇಕು. ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
    ನಿವೃತ್ತಿಯಾಗಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಒಂದು ಲಕ್ಷ ರೂ. ಇಡುಗಂಟು ಕೊಡಬೇಕು. ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯೇ ನಿರ್ವಹಿಸಬೇಕು. ನಿವೃತ್ತಿ ಹೊಂದಿದ ಬಿಸಿಯೂಟ ತಯಾರಕರ ಕುಟುಂಬದವರಿಗೆ ಕೆಲಸ ನೀಡಬೇಕೆಂದು ಒತ್ತಾಯಿಸಿದರು.
    ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾಧ್ಯಕ್ಷೆ ಹನುಮಮ್ಮ, ಪ್ರಧಾನ ಕಾರ್ಯದರ್ಶಿ ಸುನೀತಾ, ಖಜಾಂಚಿ ಸೂರ್ಯಕಲಾ, ಶಿವಮೊಗ್ಗ ತಾಲೂಕು ಅಧ್ಯಕ್ಷೆ ರೂಪಾ, ಪ್ರಮುಖರಾದ ಭಾಗ್ಯಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts