More

    ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ಪ್ರತಿಭಟನೆ

    ಹಾವೇರಿ: ಬೇಡ ಜಂಗಮರ ಕುರಿತು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಅವಹೇಳನಕಾರಿ ಹೇಳಿಕೆ ಖಂಡಿಸಿ ಶುಕ್ರವಾರ ಅಖಿಲ ಕರ್ನಾಟಕ ಬೇಡಜಂಗಮ ಸಮಾಜದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಸ್ಥಳೀಯ ಪುರಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಎಂಜಿ ರಸ್ತೆ ಮೂಲಕ ಮೈಲಾರ ಮಹದೇವ ವೃತ್ತಕ್ಕೆ ಬಂದು ಸಮಾವೇಶಗೊಂಡಿತು. ನಂತರ ಪ್ರತಿಭಟನಾಕಾರರು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಬೇಡ ಜಂಗಮ ಸಮಾಜದ ಮುಖಂಡ ಎಸ್.ಡಿ. ಹಿರೇಮಠ ಮಾತನಾಡಿ, ಮಾ. 4ರಂದು ಸದನಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು, ಬೇಡ ಜಂಗಮರು ಕೇವಲ ಮೂರು ಜಿಲ್ಲೆಗಳಲ್ಲಿದ್ದಾರೆ. ರಾಜ್ಯದ ಉಳಿದ ಯಾವುದೇ ಜಿಲ್ಲೆಯಲ್ಲಿ ಇಲ್ಲ. ಬೇಡ ಜಂಗಮರು ಹಂದಿ ಮಾಂಸ ತಿನ್ನುವವರು, ಗಾಂಜಾ ಸೇದುವವರು, ಬೇಟೆಗಾರರು ಎನ್ನುವುದು ಸೇರಿ ಇನ್ನೂ ಕೆಲ ವಿಚಾರಗಳನ್ನು ರದ್ದುಗೊಂಡಿರುವ ಸುತ್ತೋಲೆ ನೋಡಿ ಪ್ರಸ್ತಾಪಿಸಿದ್ದಾರೆ. ಆದರೆ, ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ 1995 ಜ. 18ರ ಸುತ್ತೋಲೆ ಸಂವಿಧಾನ ಬಾಹಿರ, ಕಾನೂನು ಬಾಹಿರ ಎಂದು ತೀರ್ಪು ನೀಡಿದೆ. 1977ರಲ್ಲಿ ಈ ಮೂರು ಜಿಲ್ಲೆಯ ಕ್ಷೇತ್ರ ವ್ಯಾಪ್ತಿಯನ್ನು ಹಿಂಪಡೆದು ಅದನ್ನು ರಾಜ್ಯದಲ್ಲಿರುವ ಎಲ್ಲ ಜಂಗಮರೇ ಬೇಡ ಜಂಗಮರು ಎಂದು ಪರಿಗಣಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಆದರೂ ಕೂಡ ರದ್ದುಪಡಿಸಿರುವ ಸುತ್ತೋಲೆಗಳನ್ನೇ ಇಟ್ಟುಕೊಂಡು ಇಂದಿಗೂ ಸಹ ಬೇಡಜಂಗಮ ಸಮುದಾಯದವರಿಗೆ ಸರ್ಕಾರದ ಸೌಲಭ್ಯಗಳು ದೊರೆಯದಂತೆ ಕೆಲವರು ವ್ಯವಸ್ಥಿತವಾಗಿ ಪಿತೂರಿ ನಡೆಸಿದ್ದಾರೆ ಎಂದು ದೂರಿದರು.

    1995 ಅ. 5ರಂದು ಈ ಸುತ್ತೋಲೆಯನ್ನು ರಾಜ್ಯ ಸರ್ಕಾರವೇ ಹಿಂಪಡೆದುಕೊಂಡಿದ್ದರೂ ಈ ವಿಷಯಗಳನ್ನು ಮತ್ತೆ ಸದನದಲ್ಲಿ ರ್ಚಚಿಸಿ ಸದನಕ್ಕೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವುದು ಸರಿಯಲ್ಲ. ಇಂತಹ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇವರನ್ನು ಕೂಡಲೆ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

    ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ನೀಡಿರುವ ಬೆಳಗಾವಿ ತಾಲೂಕಿನ ಗ್ರೇಡ್-2 ತಹಸೀಲ್ದಾರ್, ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿರುವ ಆದೇಶವನ್ನು ಸರ್ಕಾರ ತಕ್ಷಣ ಹಿಂದೆ ಪಡೆದುಕೊಳ್ಳಬೇಕು. ಒಂದು ವೇಳೆ ಸರ್ಕಾರ ಈ ಕುರಿತು ವಿಳಂಬ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

    ಎಸ್.ಎಸ್. ಮಠದ, ಮಂಜುನಾಥ ಮಠಪತಿ, ಗುರು ಹಿರೇಮಠ, ಶಿವಾನಂದ ಹಿರೇಮಠ, ಗುರುನಾಥಯ್ಯ ಮಳ್ಳೂರಮಠ, ರಾಜು ಕಲ್ಯಾಣಮಠ, ಬಸಯ್ಯ ಹಿರೇಮಠ, ರಾಚಯ್ಯ ಪಾಟೀಲ, ಮುತ್ತಯ್ಯ ರಿತ್ತಿಮಠ, ಎ.ಕೆ. ಅದ್ವಾನಿಮಠ, ಚಂದ್ರಶೇಖರಯ್ಯ ಗುಡೂರಮಠ, ಎನ್.ಎಂ. ಹಿರೇಮಠ, ಸಿ.ಪಿ. ಸುತ್ತೂರಮಠ, ಬಸವರಾಜಯ್ಯ ಹಿರೇಮಠ, ಗುರುಶಾಂತಯ್ಯ ಹಿರೇಮಠ, ಕರಬಸಯ್ಯ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts