More

    ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಕನಕಪುರ
    ಬೆಂಗಳೂರು ಜಲಮಂಡಳಿಯಿಂದ ನಡೆಯುತ್ತಿರುವ ಅಸಮರ್ಪಕ ಪೈಪ್‌ಲೈನ್ ಕಾಮಗಾರಿ ವಿರೋಧಿಸಿ ಸಾತನೂರು ರಸ್ತೆ ಅಚ್ಚಲು ಗೇಟ್ ಸಮೀಪ ಗ್ರಾಮಸ್ಥರು ಶನಿವಾರ ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟಿಸಿದರು.


    ಜಲಮಂಡಳಿಯಿಂದ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಮಂಡಳಿಯ ವಿರುದ್ಧ ಘೋಷಣೆ ಕೂಗಿದರು.
    ಗ್ರಾಪಂ ಸದಸ್ಯ ಕುಮಾರಸ್ವಾಮಿ ಮಾತನಾಡಿ, ಬೆಂಗಳೂರು ಜಲಮಂಡಳಿಯಿಂದ ತೊರೆಕಾನಡನಹಳ್ಳಿಯಿಂದ ಬೆಂಗಳೂರಿಗೆ ನಿರ್ಮಾಣವಾಗುತ್ತಿರುವ ಪೈಪ್‌ಲೈನ್ ಕಾಮಗಾರಿ ಇಲಾಖೆಯ ನಿಮಯಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅಸಮರ್ಪಕ ಹಾಗೂ ಕಳಪೆ ಕಾಮಗಾರಿ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿಯ ಗುತ್ತಿಗೆದಾರರು ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


    ಕಳಪೆ ಕಾಮಗಾರಿ ನಡೆಸುತ್ತಿರುವುದಲ್ಲದೇ, ರಾಜಕೀಯ ಪ್ರಭಾವಕ್ಕೆ ಒಳಗಾಗಿ ರೈತರ ಜಮೀನುಗಳ ಬಳಿ ಬೇಕಾಬಿಟ್ಟಿ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಅಚ್ಚಲು ಗೇಟ್ ಬಳಿ ಮಾಡುತ್ತಿರುವ ಕಾಮಗಾರಿಯಿಂದ ನಿತ್ಯ ದ್ವಿಚಕ್ರವಾಹನ ಸವಾರರು ಎದ್ದು ಬಿದ್ದು ಹೋಗಬೇಕಾಗಿದೆ. ಹಲವು ಮಂದಿಗೆ ತೊಂದರೆಗಳು ಉಂಟಾಗುತ್ತಿದೆ. ರಸ್ತೆ ಕಾಮಗಾರಿ ಮಾಡುವಾಗ ಮುಂಜಾಗೃತ ಕ್ರಮಗಳನ್ನು ಪಾಲನೆ ಮಾಡುತ್ತಿಲ್ಲ. ಈ ಎಲ್ಲ ಲೋಪ ದೋಷಗಳನ್ನು ಗ್ರಾಮಸ್ಥರು ಗುತ್ತಿಗೆದಾರರಿಗೆ ಕೇಳಲು ಹೋದರೆ ಸ್ಥಳೀಯ ಪೊಲೀಸರ ಮೂಲಕ ಬೆದರಿಕೆ ಹಾಕುವ ತಂತ್ರವನ್ನು ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದೆ ಹೋದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.


    ಪಿಡಿಒ ಬಂಗಾರಯ್ಯ, ಜಲಮಂಡಳಿಯ ಇಂಜಿನಿಯರ್‌ಗಳು, ಗುತ್ತಿಗೆದಾರರು, ಗ್ರಾಮಸ್ಥರು ಸ್ಥಳದಲ್ಲಿ ಹಾಜರಿದ್ದರು.
    ಸಾತನೂರು ಸಬ್‌ಇನ್‌ಸ್ಪೆಕ್ಟರ್ ಹರೀಶ್ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ಗ್ರಾಮಸ್ಥರಾದ ರಾಜೇಶ್, ದೇಶೀಗೌಡ, ಶಿವಲಿಂಗಯ್ಯ, ಕಿರಣ, ಶಿವಲಿಂಗ ಸೇರಿ ಹಲವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts