More

    ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ

    ಆಲೂರು: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ಖಂಡಿಸಿ ಶನಿವಾರ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೊಲೆಗಾರನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

    ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಿನಿ ವಿಧಾನಸೌಧ ಆವರಣದಲ್ಲಿ ಜಮಾಯಿಸಿ ಕೊಲೆಗಡುಕನ ವಿರುದ್ಧ ಧಿಕ್ಕಾರ ಕೂಗಿದರು.

    ಆಲೂರು ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷರಾದ ಉಮಾದೇವಿ ಪ್ರಕಾಶ್ ಮಾತನಾಡಿ, ಶಾಲೆ-ಕಾಲೇಜುಗಳು ಜ್ಞಾನದ ದೇಗುಲಗಳು, ಇಂತಹ ದೇಗುಲದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾಳನ್ನು ಭೀಕರವಾಗಿ ಹತ್ಯೆಗೈಯ್ಯಲಾಗಿದೆ. ಇದರಿಂದ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ ಎಂದರು.

    ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಕಾಲೇಜಿನ ಒಳಗೆ ಬಂದು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲು ಸಾಧ್ಯವಾಗಿರಬೇಕಾದರೆ ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲವಾಗಿದೆ. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಕುಸಿದು ಹೋಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ. ಈ ಘಟನೆಯಿಂದ ರಾಜ್ಯದ ವಿದ್ಯಾರ್ಥಿ ಸಮುದಾಯ ಭಯಭೀತಗೊಂಡಿದೆ. ಪೊಲೀಸರು ಕೂಡಲೇ ಸೂಕ್ತ ತನಿಖೆ ಕೈಗೊಂಡು, ಅಪರಾಧಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಜತೆಗೆ ರಾಜ್ಯಾದ್ಯಂತ ಪೊಲೀಸರು ಶಾಲಾ-ಕಾಲೇಜುಗಳ ಬಳಿ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ವೀರಶೈವ ಸಂಘದ ತಾಲೂಕು ಅಧ್ಯಕ್ಷ ರೇಣುಕ ಪ್ರಸಾದ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅನೂಪ್, ತಾಲೂಕು ಅಧ್ಯಕ್ಷ ಡಾ.ಜಯರಾಜ್, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ನಾಗರಾಜ್, ಲೋಕೇಶ್, ನಗರಾಧ್ಯಕ್ಷ ಲೋಹಿತ್, ಮುಖಂಡರಾದ ಹಳೇ ಆಲೂರು ರಮೇಶ್, ಕಟ್ಟೆಗದ್ದೆ ನಾಗರಾಜ್, ಜೆಡಿಎಸ್ ಮುಖಂಡರಾದ ಮಲ್ಲಿಕಾರ್ಜುನ್, ಯೋಗೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts