More

    ಲೇಡಿಹಿಲ್ ನಗರ ಆರೋಗ್ಯಕೇಂದ್ರ ಅವ್ಯವಸ್ಥೆ: ಮೇಯರ್ ಕಚೇರಿಗೆ ಮುತ್ತಿಗೆ ಎಚ್ಚರಿಕೆ

    ಮಂಗಳೂರು: ಲೇಡಿಹಿಲ್ ನಗರ ಆರೋಗ್ಯ ಕೇಂದ್ರದಲ್ಲಿ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಜ್ವರಗಳಿಗೆ ನೀಡುವಂತಹ ಮಾತ್ರೆಗಳು ಕೂಡ ಎರಡು ತಿಂಗಳುಗಳಿಂದ ಸರಬರಾಜು ಮಾಡದ ಮಂಗಳೂರು ಮಹಾನಗರ ಪಾಲಿಕೆ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಎಚ್ಚರಿಸಿದರು.

    ಲೇಡಿಹಿಲ್ ನಗರ ಆರೋಗ್ಯ ಕೇಂದ್ರವನ್ನು ಮೂಲಸೌಕರ್ಯಗಳ ಸಹಿತ ಮೇಲ್ದರ್ಜೆಗೇರಿಸಲು ಒತ್ತಾಯಿಸಿ ಹಾಗೂ ಖಾಲಿ ಇರುವ ನಗರ ಆರೋಗ್ಯಾಧಿಕಾರಿ ಹುದ್ದೆ ಭರ್ತಿಗೊಳಿಸಲು ಆಗ್ರಹಿಸಿ ಆರೋಗ್ಯ ಕೇಂದ್ರದ ಮುಂಭಾಗ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

    ಪಾಲಿಕೆಯ ನಗರ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗಿ ಲಾಬಿಗೆ ಮಣಿದಿದೆ. ನಗರದ ಜನರ ಆರೋಗ್ಯ ಕಾಳಜಿ ವಹಿಸಬೇಕಾಗಿದ್ದ ನಗರ ಆರೋಗ್ಯ ಕೇಂದ್ರ ಇಂದು ನರಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎಂದರು. ಸ್ಮಾರ್ಟ್ ಸಿಟಿ ಹೆಸರಲ್ಲಿ ನಗರದ ರಸ್ತೆಗಳನ್ನು ಅಗೆದು ಕಾಂಕ್ರೀಟೀಕರಣ ನಡೆಸಿ ಕಮಿಷನ್ ಹೆಸರಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಬಿಜೆಪಿ ಆಡಳಿತಕ್ಕೆ ನಗರ ಆರೋಗ್ಯ ಅವ್ಯವಸ್ಥೆ ಕಣ್ಣಿಗೆ ಕಾಣುತ್ತಿಲ್ಲವೆ? ಎಂದು ಪ್ರಶ್ನಿಸಿದರು.

    ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಸಾಮರಸ್ಯ ಮಂಗಳೂರು ಸಂಚಾಲಕಿ ಮಂಜುಳಾ ನಾಯಕ್ ಮಾತನಾಡಿದರು.

    ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಗರ ಪಾಲಿಕೆ ಹಿರಿಯ ಆರೋಗ್ಯ ನಿರೀಕ್ಷಕ ಅರುಣ್ ಮನವಿ ಸ್ವೀಕರಿಸಿ, ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಸಿಪಿಐಎಂ ನಗರ ಸಮಿತಿ ಮುಖಂಡರಾದ ಲೋಕೇಶ್ ಎಂ., ಭಾರತೀ ಬೋಳಾರ, ಸಾದಿಕ್ ಕಣ್ಣೂರು, ನೌಶದ್ ಬೆಂಗರೆ,ಪ್ರಮೀಳಾ ಶಕ್ತಿನಗರ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ, ಸಿಐಟಿಯು ಮುಖಂಡರಾದ ಮಹಮ್ಮದ್ ಮುಸ್ತಾಫಾ, ಅಶೋಕ್ ಶ್ರೀಯಾನ್, ಡಿವೈಎಫ್‌ಐ ಮುಖಂಡರಾದ ಜಗದೀಶ್ ಬಜಾಲ್, ಮಾಧುರಿ ಬೋಳಾರ, ವಿದ್ಯಾರ್ಥಿ ಮುಖಂಡರಾದ ರೇವಂತ್ ಕದ್ರಿ, ಶಾಹಿದ್, ಸಮಝ್ ಮುಂತಾದವರು ಉಪಸ್ಥಿತರಿದ್ದರು. ಸಿಪಿಐಎಂ ನಗರ ಸಮಿತಿ ಮುಖಂಡರಾದ ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts