More

    ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ವಿದ್ಯುತ್ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದಿಂದ ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

    ಮುರುಘರಾಜೇಂದ್ರ ಮಠದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.

    ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, 1974ರಲ್ಲಿ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆ ಮಹತ್ವ ಪೂರ್ಣವಾಗಿದೆ. ಈ ಕಾಯ್ದೆಯು ಊಳುವವನ ಹಕ್ಕು ರಕ್ಷಣೆ ಮಾಡುವುದರ ಜೊತೆಗೆ ಕೃಷಿ ಭೂಮಿಯು ಉಳ್ಳವರ ಹಾಗೂ ಬಂಡವಾಳಶಾಹಿಗಳ ಹಿಡಿತಕ್ಕೆ ಒಳಗಾಗದಂತೆ ನಿರ್ಬಂಧ ವಿಧಿಸುತ್ತವೆ. ಆದರೀಗ ಇವೆಲ್ಲವುಗಳಿಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಹಣವಂತರ ಪರವಾಗಿ ನಿಂತಿದೆ. ಇದರಿಂದ ಬಡ ರೈತರಿಗೆ ಅನ್ಯಾಯ ಹಾಗೂ ರೈತರು ಗುಲಾಮಗಿರಿ ಜೀವನ ನಡೆಸಲು ಅನುವು ಮಾಡಿಕೊಟ್ಟಂತಾಗಿದೆ. ಕೂಡಲೆ ಈ ತಿದ್ದುಪಡಿಯನ್ನು ಮರಳಿ ಪಡೆಯಬೇಕು ಎಂದು ಒತ್ತಾಯಿಸಿದರು.

    ದೇಶ ಕರೊನಾ ವೈರಸ್​ನಿಂದ ತತ್ತರಿಸಿರುವ ಸಂದರ್ಭದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗಿಯವರಿಗೆ ಕೊಡಲು ಹುನ್ನಾರ ನಡೆಸಲಾಗಿದೆ. ಕೂಡಲೆ ಈ ವಿಚಾರವನ್ನು ಕೈಬಿಡಬೇಕು. ರಾಜ್ಯದಲ್ಲಿ ಈಗಾಗಲೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರ ಹಿತವನ್ನು ಬಲಿಕೊಡಲಾಗಿದೆ. ಎ ದರ್ಜೆಯ ಧಾನ್ಯವನ್ನು ಖರೀದಿಸಿ ಬಿ ಹಾಗೂ ಸಿ ದರ್ಜೆಯ ಧಾನ್ಯಗಳನ್ನು ಕೈಬಿಟ್ಟರೆ ಅದನ್ನು ರೈತರು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಇದನ್ನು ಬಂಡವಾಳಶಾಹಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರೈತರಿಗೆ ತೊಂದರೆಯಾಗದಂತೆ ಕಾಯ್ದೆಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಒತ್ತಾಯಿಸಿದರು.

    ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರಾಜ್ಯ ಸರ್ಕಾರದ ಮರಳು ನೀತಿಯಲ್ಲಿ ಸಾಕಷ್ಟು ಗೊಂದಲವಿದೆ. ಬಡವರು ಮನೆ, ಸಾರ್ವಜನಿಕ ಕೆಲಸಗಳಿಗೆ ಮರಳು ಸಿಗುತ್ತಿಲ್ಲ. ಬಡವರಿಗೆ ಕೈಗೆಟುವ ದರದಲ್ಲಿ ಮರಳು ವಿತರಿಸಬೇಕು. 2016-17ರಿಂದ 2019-20ರ ವರೆಗೆ ಬೆಳೆ ವಿಮೆಯಲ್ಲಿ ಸಾಕಷ್ಟು ತಾರತಮ್ಯವಾಗಿದ್ದು, ಅದನ್ನು ಸರಿಪಡಿಸಬೇಕು. 2019-20ರಲ್ಲಿ ಮಂಜೂರಾದ 49 ಕೋಟಿ ಹಣವನ್ನು ಸಮರ್ಪಕವಾಗಿ ರೈತರಿಗೆ ವಿತರಿಸಬೇಕು ಎಂದರು. ಮಹ್ಮದ್​ಗೌಸ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಪ್ಯಾಟಿ, ಕರಬಸಪ್ಪ ಅಗಸಿಬಾಗಿಲ, ಮರಿಗೌಡ ಪಾಟೀಲ, ಶಂಕ್ರಪ್ಪ ಶಿರಗಂಬಿ, ದಿಳ್ಳೆಪ್ಪ ಮಣ್ಣೂರ, ಮಾಲತೇಶ ಪರಪ್ಪನವರ, ಸುರೇಶ ಚಲವಾದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts