More

    ಪಪಂ ಮುಖ್ಯಾಧಿಕಾರಿ ವರ್ಗಾವಣೆಗೆ ಪಟ್ಟು ; ಹುಳಿಯಾರಿನಲ್ಲಿ ಸಂಘಟನೆಗಳ ಧರಣಿ

    ಹುಳಿಯಾರು : ಸಾರ್ವಜನಿಕರಿಗೆ ಸ್ಪಂದಿಸದೆ, ಸ್ಥಳೀಯ ಸದಸ್ಯರ ಮಾತಿಗೆ ಕಿಮ್ಮತ್ತು ಕೊಡದೆ, ಸಣ್ಣಪುಟ್ಟ ಕೆಲಸಗಳಿಗೆ ಜನಸಾಮಾನ್ಯರನ್ನು ಕಚೇರಿಗೆ ಅಲೆಸುವ ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ರೈತ ಸಂಘ, ಜಯಕರ್ನಾಟಕ ಸೇರಿ ವಿವಿಧ ಸಂಘ-ಸಂಸ್ಥೆಗಳು, ಹಾಲಿ ಮತ್ತು ಮಾಜಿ ಪಪಂ ಸದಸ್ಯರು ಗುರುವಾರ ಪಟ್ಟಣ ಪಂಚಾಯಿತಿ ಕಚೇರಿ ಬಳಿ ಧರಣಿ ನಡೆಸಿದರು.

    ಅಲ್ಲದೇ ಹುಳಿಯಾರಿನ ರಾಮಗೋಪಾಲ್ ಸರ್ಕಲ್‌ನಿಂದ ಪಪಂವರೆವಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಅನೇಕ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಹಾಗಾಗಿ ಅಧಿಕಾರಿಗಳು ಇದನ್ನು ಮನಗಂಡು ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

    ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಒಮ್ಮೆ ಮಂತ್ರಿಯೂ ಸಹ ಆಗಿದ್ದೆ. ನಮ್ಮ ಕಾಲದಲ್ಲಿದ್ದ ಸೊಬಗು ಈಗ ಇಲ್ಲದಾಗಿದೆ. ಪಟ್ಟಣಕ್ಕೆ ಪ್ರವೇಶಿಸುವ ರಸ್ತೆ ಹಾಳಾಗಿದೆ, ಊರೊಳಗೆ ನೈರ್ಮಲ್ಯ, ಬೀದಿದೀಪ ಕಾಣದಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ನಾಲ್ಕೈದು ಕೋಟಿ ರೂ. ವೆಚ್ಚದಲ್ಲಿ ಬೋರನಕಣಿವೆ ಜಲಾಶಯದಿಂದ ಹುಳಿಯಾರಿಗೆ ನೀರು ಕೊಟ್ಟಿದ್ದೇನೆ. ಆದರೆ ಈ ನೀರನ್ನು ಶುದ್ಧ ಮಾಡಿ ಪಟ್ಟಣದ ನಿವಾಸಿಗಳಿಗೆ ಕೊಡದೆ ಯೋಜನೆಯನ್ನೇ ವ್ಯರ್ಥ ಮಾಡಿದ್ದಾರೆ. ಊರಿಗೆ ಬಂದೋಗುವ ಜನಪತ್ರಿನಿಧಿಗಳಿಗೆ ಕಣ್ಣುಗಳು ಇದ್ದಾವೋ ಇಲ್ಲವೂ ತಿಳಿಯದಾಗಿದೆ ಎಂದು ಕುಟುಕಿದರು.

    ಧರಣಿ ಕೈ ಬಿಡುವುದಿಲ್ಲ : ಹೊಸಮನೆ ಕಟ್ಟಲು ಎನ್‌ಒಸಿಗಾಗಿ ಪಂಚಾಯಿತಿ ಕಚೇರಿಗೆ ಜನ ಅಲೆಯುತ್ತಿದ್ದಾರೆ. ಆದರೆ ದುಡ್ಡುಕೊಟ್ಟವರಿಗೆ ಬೇಗನೆ ಕೆಲಸ ಮಾಡಿಕೊಡುತ್ತಾರೆ. ದುಡ್ಡುಕೊಟ್ಟಿರುವವರು ಬಹಿರಂವಾಗಿ ಹೇಳುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ರಕ್ಷಣೆಗೆ ನಿಂತಿದ್ದಾರೆ. ಮನೆ ಕಟ್ಟಲು ಎನ್‌ಒಸಿ ಹಾಗೂ ಲೈಸೆನ್ಸ್ ನೀಡುವುದನ್ನೇ ದಂಧೆ ಮಾಡಿಕೊಂಡು ಅವ್ಯವಹಾರಕ್ಕೆ ಇಳಿದಿರುವ ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ವರ್ಗಾವಣೆ ಮಾಡುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಹೇಳಿದರು.

    ಪಟ್ಟಣ ಪಂಚಾಯಿತಿ ಚುನಾವಣೆಯಾಗಿ ಮೂರ‌್ನಲ್ಕು ತಿಂಗಳಾಗಿದ್ದರೂ ಅಧ್ಯಕ್ಷರನ್ನು ನೇಮಿಸದೆ ಕರೊನಾ ನೆಪವೊಡ್ಡಿ ಮುಂದೂಡಿದ್ದಾರೆ. ಆದರೆ ಸಚಿವ ಸಂಪುಟ ಬದಲಾವಣೆಗೆ ಕರೊನಾ ಅಡ್ಡಿಬಾರದೆ ನಡೆಯಿತು. ಅದೂ ಜನಸಂದಣಿಯ ನಡುವೆ.
    ವೈ.ಸಿ.ಸಿದ್ಧರಾಮಯ್ಯ ಜಿಪಂ ಸದಸ್ಯ

    ದಾಖಲೆ ಕೊಟ್ಟರೆ ರಾಜೀನಾಮೆ ನೀಡುವೆ ಎಂದ ಮುಖ್ಯಾಧಿಕಾರಿ ; ಧರಣಿ ಸ್ಥಳದಲ್ಲಿ ಅನೇಕರು ಪಟ್ಟಣ ಪಂಚಾಯಿತಿ ಭ್ರಷ್ಟಾಚಾರದ ಬಗ್ಗೆ ಜಯಚಂದ್ರ ಅವರಿಗೆ ವಿವರಿಸಿದರು. 25 ಸಾವಿರ ರೂ. ಪಡೆದು ಖಾತೆ ಮಾಡಿಕೊಟ್ಟರು ಎಂದು ಮುಬಾರಕ್ ದೂರಿದರೆ, ಆರೇಳು ತಿಂಗಳಿಂದ ಎನ್‌ಒಸಿಗಾಗಿ ಅಲೆಯುತ್ತಿದ್ದರೂ ಬೇರೆಯವರಿಗೆ ಕೊಟ್ಟರೂ ನನಗೆ ಕೊಡ್ತಿಲ್ಲ ಎಂದು ನಿವೃತ್ತ ಯೋಧ ಲಕ್ಷ್ಮೀಕಾಂತ್ ಅಲವತ್ತುಕೊಂಡರು. ಆಗ ತಕ್ಷಣ ಮುಖ್ಯಾಧಿಕಾರಿ ಕರೆಯಿರಿ ಇದೇನು ಕತೆ ಕೇಳೋಣ ಎಂದು ಮಾಜಿ ಸಚಿವ ಜಯಚಂದ್ರ ಬೆಂಬಲಿಗರನ್ನು ಕಳುಹಿಸಿದರು. ಆದರೂ ಮುಖ್ಯಾಧಿಕಾರಿವ ಬಾರದಿದ್ದಾಗ ಜಯಚಂದ್ರ ಅವರೇ ಕಚೇರಿ ಒಳಗಿರುವ ಅವರ ಬಳಿ ತೆರಳಿದರು. ಮುಂಜುನಾಥ್ ಅವರನ್ನು ನೋಡಿ ನೀನೇನಯ್ಯ ಇಲ್ಲಿ ಮುಖ್ಯಾಧಿಕಾರಿ ಎಂದರು. ಅದಕ್ಕವರು ಹೌದು ಸಾರ್ ನಾನೇ ನಿಮ್ಮ ಶಿಷ್ಯ ಎಂದರು. ನಿನ್ನ ಶಿಷ್ಯ ಅನ್ನೋದಿಕ್ಕೆ ನಾಚಿಕೆ ಆಗುತ್ತಿದೆ. ಏನಯ್ಯ ಜನರಿಂದ ಹೀಗೆ ಹಣ ಸುಲಿಗೆ ಮಾಡ್ತಿದ್ದಿಯಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ನಾನು ಹಣ ಪಡೆದಿರುವುದನ್ನು ಸಾಬೀತು ಮಾಡಿದರೆ ಈ ಕ್ಷಣವೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಇದುವರೆವಿಗೂ ಯಾರಿಂದಲೂ ಒಂದು ನಯಾಪೈಸೆ ಮುಟ್ಟಿಲ್ಲ, ಮುಟ್ಟೋದು ಇಲ್ಲ ಸಾರ್ ಎಂದು ಮಂಜುನಾಥ್ ಹೇಳಿದರು. ಜಯಚಂದ್ರ ಮೌನಕ್ಕೆ ಶರಣಾಗಿ ಹೊರ ಬಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts