More

    ಅಂಚೆ ಮತಪತ್ರ ಸಮರ್ಪಕವಾಗಿ ವಿತರಿಸಿ: ಡಾ.ಕೆ.ವಿ.ರಾಜೇಂದ್ರ

    ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 85 ವರ್ಷ ಮೀರಿದವರು, ಅಂಗವಿಕಲರು ಮತ್ತು ಕೋವಿಡ್ ಪೀಡಿತರಿಗೆ ವಿತರಿಸಲಾಗುವ ಅಂಚೆ ಮತಪತ್ರಗಳ ವಿತರಣಾ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅಧಿಕಾರಿ, ಸಿಬ್ಬಂದಿಗೆ ನಿರ್ದೇಶನ ನೀಡಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಅಂಚೆ ಮತಪತ್ರ ವಿತರಣೆ ಕಾರ್ಯದ ಕುರಿತಂತೆ ಜಿಲ್ಲೆಯಲ್ಲಿನ 85 ವರ್ಷ ಮೀರಿದವರು, ಅಂಗವಿಕಲರು ಮತ್ತು ಕೋವಿಡ್ ಪೀಡಿತರಿಗೆ ಮತಪತ್ರ ವಿತರಣೆ ನೀಡುವ ಕುರಿತು ಮನೆ ಮನೆಗಳಿಗೆ ಭೇಟಿ ನೀಡುವ ಕುರಿತಂತೆ ಸಾಕಷ್ಟು ಮುಂಚಿತವಾಗಿ ಪ್ರಚಾರ ಮಾಡಬೇಕು. ಪ್ರತಿಯೊಬ್ಬ ಅರ್ಹರ ಮನೆಗಳಿಗೂ ಭೇಟಿ ನೀಡಿ 12 ಡಿ ಫಾರ್ಮ್ ವಿತರಿಸಿ, ಒಪ್ಪಿಗೆ ಪತ್ರ ಪಡೆಯುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.
    85 ವರ್ಷ ಮೇಲಿನವರಿಗೆ, ಅಂಗವಿಕಲರಿಗೆ ಹಾಗೂ ಕೋವಿಡ್‌ನಿಂದ ಬಾಧಿತರಾದವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮತದಾರರು ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಿದಾಗ ಮತದಾನ ಹಬ್ಬ ಎನಿಸಿಕೊಳ್ಳುತ್ತದೆ. ಸಾಧ್ಯವಾದಷ್ಟು ಮತಕೇಂದ್ರಗಳಿಗೆ ಹೋಗಿ ಮತದಾನ ಮಾಡಲು ಜನರನ್ನು ಪ್ರೇರೇಪಿಸಬೇಕು. ಮತಕೇಂದ್ರಕ್ಕೆ ಬರಲು ಆಗದವರಿಗೆ ಅಂಚೆ ಮತಪತ್ರ ಕಡ್ಡಾಯವಾಗಿ ವಿತರಣೆ ಮಾಡಿ ಮತದಾನ ಮಾಡುವ ಕ್ರಮಗಳನ್ನು ವಿವರಿಸಬೇಕು. ಈ ಮೂಲಕ ಮತದಾನದಿಂದ ಯಾರು ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
    ಒಮ್ಮೆ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದಲ್ಲಿ ಮತಕೇಂದ್ರಕ್ಕೆ ಬಂದು ಮತದಾನ ಮಾಡಲು ಚುನಾವಣಾ ಅಯೋಗವು ಅವಕಾಶ ಕಲ್ಪಿಸುವುದಿಲ್ಲ. ಈ ವಿಷಯವನ್ನು ಮತದಾರರಿಗೆ ಮೊದಲೇ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
    ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಹಾಗೂ ಅಗತ್ಯ ಸೇವೆಗಳಲ್ಲಿ ತೊಡಗಿರುವ ಎಲ್ಲ ನೌಕರರು ಈ ಸೌಲಭ್ಯ ಲಭ್ಯವಿದೆ. ಎಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
    12 ಡಿ ಫಾರ್ಮ್ ಚುನಾವಣಾ ವೆಬ್ಸೈಟ್, ಆನ್‌ಲೈನ್‌ನಲ್ಲಿ ಲಭ್ಯವಿದ್ದು ಅಲ್ಲಿಯೂ ಫಾರ್ಮ್ ಡೌನ್‌ಲೋಡ್ ಮಾಡಿಕೊಳ್ಳಬಹುದು. 85 ವರ್ಷ ಮೇಲಿನವರು ಹಾಗೂ ಶೇ.40ರಷ್ಟು ಅಂಗವೈಕಲ್ಯ ಹೊಂದಿದವರಿಗೆ ಮತದಾರರ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ನೀಡಲಾಗಿದೆ. ಇಂದೇ ಸೆಕ್ಟರ್ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳ ಜತೆ ಮನೆ ಮನೆಗೆ ಭೇಟಿ ನೀಡಿ 12 ಡಿ ಫಾರ್ಮ್ ವಿತರಣೆ ಮಾಡಲು ಅಗತ್ಯ ಕ್ರಮವಹಿಸಬೇಕು. ಪ್ರತಿ ದಿನ ಫಾರ್ಮ್ ವಿತರಣೆ ಮಾಡಿರುವ ಅಂಕಿಅಂಶಗಳ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
    ವಿತರಿಸಲಾದ ಅಂಚೆ ಮತಪತ್ರ ಫಾರ್ಮ್‌ಗಳನ್ನು ಮಾರ್ಚ್ 25 ರೊಳಗಾಗಿ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು. ತದನಂತರ ಬಂದ ಫಾರ್ಮ್‌ಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದರು.
    ಸಹಾಯಕ ಚುನಾವಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಅಂಚೆ ಮತಪತ್ರ ವಿತರಣೆಗೆ ನಿಯೋಜಿಸಲಾಗಿರುವ ವಿವಿಧ ನೋಡಲ್ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts