More

    ನೇರ ಮಾರಾಟಕ್ಕೆ ರೈತ ಸಂತೆ ಉತ್ತೇಜಿಸಿ

    ವಿಜಯವಾಣಿ ಸುದ್ದಿಜಾಲ ಧಾರವಾಡ

    ಜಿಲ್ಲೆಯಲ್ಲಿ ಈವರೆಗೆ 13,033 ಜನರನ್ನು ಕೋವಿಡ್ (ಕರೊನಾ) ತಪಾಸಣೆ ಗೊಳಪಡಿಸಿದ್ದು ಅವರಲ್ಲಿ 12,432 ಜನರ ವರದಿ ನೆಗೆಟಿವ್ ಬಂದಿವೆ. ಕೋವಿಡ್ ನಿಯಂತ್ರಣ ಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ತೃಪ್ತಿಕರವಾಗಿವೆ. ಜಿಲ್ಲೆಯು ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆದ ಕರೊನಾ ನಿಯಂತ್ರಣ ಹಾಗೂ ಇತರ ವಿಷಯಗಳ ಕುರಿತ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಹೊರ ರಾಜ್ಯಗಳಿಂದ ಬಂದಿ ರುವ 1,664 ಜನರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಿರುವುದು, ಸೀಲ್​ಡೌನ್ ತೆರವು ಗೊಳಿಸಿರುವ ಪ್ರದೇಶಗಳ ಮಾಹಿತಿ ಪಡೆದರು. ಸದ್ಯ ಚಿಕಿತ್ಸೆ ಪಡೆಯುತ್ತಿರುವ 33 ಜನರ ಆರೋಗ್ಯ ಸ್ಥಿತಿ, ಕೋವಿಡ್ ಆಸ್ಪತ್ರೆಯ ಸೌಕರ್ಯಗಳು, ಕಟ್ಟಡ, ರಸ್ತೆ ನಿರ್ಮಾಣ ಕಾಮಗಾರಿ, ವಾಣಿಜ್ಯ ವಹಿವಾಟು ಪುನರಾರಂಭದ ಹಂತಗಳ ಕುರಿತು ಪರಿಶೀಲಿಸಿದರು. ಪಡಿತರ ವಿತರಣೆಯಲ್ಲಿ ಅಕ್ಕಿ ಬದಲು ಬೇರೆ ಧಾನ್ಯ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಲಾಗುವುದು ಎಂದರು.

    ಜಿಲ್ಲೆಯಲ್ಲಿ 2,09,445 ಕ್ವಿಂಟಾಲ್ ಕಡಲೆಯನ್ನು ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲಾಗಿದ್ದು, ಅಂದಾಜು 102 ಕೋಟಿ ರೂ. ಪಾವತಿಸಲಾಗುವುದು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ವಿಳಂಬವಿಲ್ಲದೇ ಅನುಮತಿ ನೀಡಬೇಕು. ಸಾಫ್ಟ್​ವೇರ್​ನಲ್ಲಿ ತೊಡಕುಗಳಿದ್ದರೆ ತಕ್ಷಣ ಸರಿಪಡಿಸಬೇಕು. ಜಿಲ್ಲೆಯಲ್ಲಿ ಶೇ. 68ರಷ್ಟು ಕೈಗಾರಿಕಾ ಚಟುವಟಿಕೆಗಳು ಪ್ರಾರಂಭವಾಗಿವೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಪಾವತಿ ತ್ವರಿತಗೊಳಿಸಿದರೆ, ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ.

    ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾದ ರೈತ ಸಂತೆಗಳಿಗೆ ಉತ್ತೇಜನ ನೀಡಬೇಕು. ಅವಳಿ ನಗರದಲ್ಲಿ ತರಕಾರಿ ಮಾರುಕಟ್ಟೆಗಳು ಕೇಂದ್ರೀಕರಣವಾಗಬಾರದು, ವಿವಿಧ ಮೈದಾನಗಳಿಗೆ ವಿಕೇಂದ್ರೀಕರಣ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಮಾತನಾಡಿ, ಇದುವರೆಗೆ 13,764 ಜನರ ಮೇಲೆ ನಿಗಾ ವಹಿಸಲಾಗಿದೆ. 568 ಜನರ ಕಫ ಪರೀಕ್ಷಾ ವರದಿ ನಿರೀಕ್ಷಿಸಲಾಗುತ್ತಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ ಮತ್ತಿತರ ಅಧಿಕಾರಿಗಳು ಇದ್ದರು.

    ಸಾಲ ವಸೂಲಿಗೆ ಒತ್ತಡ ಹಾಕಬೇಡಿ: ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಎಲ್ಲ ವರ್ಗಗಳ ಜನತೆ ಸಂಕಷ್ಟದಲ್ಲಿದ್ದಾರೆ. ಬ್ಯಾಂಕ್​ಗಳು ಮತ್ತು ಕಿರು ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಗ್ರಾಹಕರ ಮೇಲೆ ಒತ್ತಡ ಹಾಕಬಾರದು. ಈ ಕುರಿತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬ್ಯಾಂಕರ್​ಗಳ ಪ್ರತ್ಯೇಕ ಸಭೆ ಕರೆದು ನಿರ್ದೇಶನ ನೀಡಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಲವು ಖಾಸಗಿ ಬ್ಯಾಂಕ್​ಗಳು ಮತ್ತು ಕಿರು ಹಣಕಾಸು ಸಂಸ್ಥೆಗಳು ಸಾಲದ ಕಂತು ಮರುಪಾವತಿ ಮಾಡದ ಗ್ರಾಹಕರಿಗೆ ದಂಡ ಹಾಕುತ್ತಿರುವ ಬಗ್ಗೆ ದೂರುಗಳಿವೆಯಲ್ಲ? ಎಂಬ ಮಾಧ್ಯಮದವರ ಪ್ರಶ್ನೆಗೆ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಯಾವುದೇ ಬ್ಯಾಂಕ್​ಗಳು, ಕಿರು ಹಣಕಾಸು ಸಂಸ್ಥೆಗಳು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ 2-3 ತಿಂಗಳ ಅವಧಿಗೆ ಸಾಲ ವಸೂಲಿ ಕಾರ್ಯ ಮುಂದೂಡಬೇಕು ಎಂದರು. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ನಿರ್ದೇಶನಗಳನ್ನು ಜನತೆ ತಪ್ಪದೆ ಪಾಲಿಸಬೇಕು. ದೇಶದ ಆರ್ಥಿಕತೆ ಹಿತದೃಷ್ಟಿಯಿಂದ ಲಾಕ್​ಡೌನ್ ನಿಂದ ಕೆಲ ವಿನಾಯಿತಿ ನೀಡಲಾಗಿದೆ. ಜನತೆ ಪರಸ್ಪರ ಅಂತರ ಕಾಪಾಡುವುದು, ಮಾಸ್ಕ್ ಬಳಕೆ, ಸ್ಯಾನಿಟೈಸರ್ ಉಪಯೋಗ ರೂಢಿಸಿಕೊಂಡು ಕರೊನಾ ವಿರುದ್ಧದ ಹೋರಾಟಕ್ಕೆ ಸಹಕರಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts