More

    ನಿಷೇಧಿತ ಪ್ರದೇಶಗಳಲ್ಲಿ ಡ್ರೋನ್ ಗಸ್ತು

    ಬೆಳಗಾವಿ: ಬೆಳಗಾವಿಯಲ್ಲಿ ಕರೊನಾ ವೈರಸ್ ಪ್ರಕರಣ ಹೆಚ್ಚು ದೃಢವಾಗುತ್ತಿದ್ದರೂ ಜನರು ಲಾಕ್‌ಡೌನ್ ಉಲ್ಲಂಘಿಸಿ ನಗರದಲ್ಲಿ ಸಂಚರಿಸುತ್ತಲೇ ಇದ್ದಾರೆ. ಹೀಗಾಗಿ ಸ್ಮಾರ್ಟ್‌ಸಿಟಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ನಿಷೇಧಿತ ಪ್ರದೇಶಗಳ ಮೇಲೆ ಡ್ರೋನ್ ಕ್ಯಾಮರಾ ಮೂಲಕ ನಿಗಾ ಇಡುತ್ತಿದ್ದಾರೆ.

    ನಗರದ ಕಂಟೋನ್ಮೆಂಟ್ ಹಾಗೂ ರೆಡ್‌ರೆನ್‌ಗಳಾಗಿ ಗುರುತಿಸಿಕೊಂಡಿರುವ ಕ್ಯಾಂಪ್ ಪ್ರದೇಶ, ಅಮಾನ್‌ನಗರ, ಅಜಂನಗರ ಆಸ್ಮಾ ಕಾಲನಿಯಲ್ಲಿ ಡ್ರೋನ್ ಕ್ಯಾಮರಾ ಗಸ್ತು ಮಾಡುತ್ತಿದೆ. ಈ ಪ್ರದೇಶದಲ್ಲಿ ಜನರು ಓಡಾಡದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸುತ್ತಿದ್ದಾರೆ.

    13 ಡ್ರೋನ್ ಕ್ಯಾಮರಾ: ಸೋಮವಾರ ಒಟ್ಟು 13 ಡ್ರೋನ್ ಕ್ಯಾಮರಾಗಳನ್ನು ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ. ವಿಶ್ವೇಶ್ವರ ನಗರದಲ್ಲಿರುವ ಸ್ಮಾರ್ಟ್‌ಸಿಟಿ ಕಮಾಂಡಿಂಗ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮೂಲಕ ಡ್ರೋನ್ ಕ್ಯಾಮರಾಗಳನ್ನು ಮಾನಿಟರ್ ಮಾಡಲಾಗುತ್ತಿದೆ. ಈ ಮೂಲಕ ಅಧಿಕಾರಿಗಳು ಸ್ಮಾರ್ಟ್‌ಸಿಟಿ ಕಂಪನಿ ತಂತ್ರಜ್ಞಾನವನ್ನು ಕರೊನಾ ವೈರಸ್ ನಿಯಂತ್ರಣಕ್ಕೆ ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಸ್ಮಾರ್ಟ್
    ಸಿಟಿ ಕಂಪನಿ ತಾಂತ್ರಿಕ ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.

    ಸ್ಮಾರ್ಟ್‌ಸಿಟಿ ತಂತ್ರಜ್ಞಾನವನ್ನು ಕರೊನಾ ಸೋಂಕು ನಿಯಂತ್ರಿಸಲು ಬಳಸುವಂತೆ ಮಹಾನಗರ ಪಾಲಿಕೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಸಲಹೆ ನೀಡಿದ್ದರು.

    ಏಕಕಾಲಕ್ಕೆ 3 ಕಿ.ಮೀ. ಮೇಲೆ ನಿಗಾ

    ಕಂಟೋನ್ಮೆಂಟ್ ಹಾಗೂ ರೆಡ್‌ರೆನ್ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದರೂ ಜನ ಸಂಚರಿಸುತ್ತಿದ್ದಾರೆ. ಇಂತವರನ್ನು ಪತ್ತೆ ಹಚ್ಚಲು ಡ್ರೋನ್ ಕ್ಯಾಮರಾ ಬಳಸುವ ಮೂಲಕ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಸೋಮವಾರ ಡ್ರೋನ್‌ಗಳನ್ನು ಪರೀಕ್ಷಾರ್ಥವಾಗಿ ಹಾರಿಸಲಾಯಿತು. ವಿಶ್ವೇಶ್ವರ ನಗರದ ಕಮಾಂಡ್ ಸೆಂಟರ್ ಮೂಲಕ ಇವುಗಳನ್ನು ನಿಯಂತ್ರಿಸಲಾಯಿತು. ಒಂದೇ ಕಡೆ ನಿಂತು ಸುಮಾರು 3 ಕಿ.ಮಿ. ವ್ಯಾಪ್ತಿಯ ಪ್ರದೇಶದ ಚಿತ್ರಣ ತೋರಿಸುವ ಸಾಮರ್ಥ್ಯವನ್ನು ಡ್ರೋನ್ ಕ್ಯಾಮರಾ ಹೊಂದಿವೆ. ಇನ್ನು ಮುಂದೆ ಅನಗತ್ಯವಾಗಿ ಮನೆಯಿಂದ ಹೊರಗೆ ಬರುವವರು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗುತ್ತಾರೆ. ಅಂತವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.

    ನಿಷೇಧಿತ ಪ್ರದೇಶಗಳಲ್ಲಿ ಜನರು ಸಂಚಾರ ಮಾಡುತ್ತಿರುವುದು ಕಡಿಮೆಯಾಗುತ್ತಿಲ್ಲ. ಹೀಗಾಗಿ ಡ್ರೋನ್‌ಗಳ ಮೊರೆ ಹೋಗಲಾಗಿದೆ. ಈಗಾಗಲೇ ಪ್ರಯೋಗ ಮಾಡಲಾಗಿದೆ. ಮಂಗಳವಾರ ಅಥವಾ ಬುಧವಾರದಿಂದ ನಿಷೇಧಿತ ಪ್ರದೇಶಗಳ ಮೇಲೆ ಡ್ರೋನ್‌ಗಳ ಮೂಲಕ ನಿಗಾ ಇಡಲಾಗುವುದು.
    | ಶಶಿಧರ ಕುರೇರ ವ್ಯವಸ್ಥಾಪಕ ನಿರ್ದೇಶಕ, ಬೆಳಗಾವಿ ಸ್ಮಾರ್ಟ್‌ಸಿಟಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts