More

    ಅರ್ಹರಿಗೆ ಆದ್ಯತೆ ಮೇರೆಗೆ ಬರ ಪರಿಹಾರ ಹಣ ತಲುಪಿಸಿ

    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಸೂಚನೆ

    ಜಿಪಂ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಬರಗಾಲದಿಂದ ಇಳುವರಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಬರ ಪರಿಹಾರ ಹಣವನ್ನು ಅರ್ಹರಿಗೆ ತಡಮಾಡದೆ ತಲುಪಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಂ ಸೂಚಿಸಿದರು.
    ದೇವನಹಳ್ಳಿಯ ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. 46,003 ಹೆಕ್ಟೇರ್ ರಾಗಿ , 3,477 ಹೆಕ್ಟೇರ್ ಮೆಕ್ಕೆಜೋಳ, 68.95 ಹೆಕ್ಟೇರ್ ತೊಗರಿ, 9.50 ಹೆಕ್ಟೇರ್‌ನಲ್ಲಿ ನೆಲಗಡಲೆ ಸೇರಿ 49,559 ಹೆಕ್ಟೇರ್ ಬೆಳೆ ಹಾನಿಯಾಗಿದೆ, ಬೆಳೆ ಸಮೀಕ್ಷೆ ವರದಿಯಂತೆ ರೈತರಿಗೆ ಬರ ಪರಿಹಾರ ತ್ವರಿತವಾಗಿ ತಲುಪಿಸಲು ಕ್ರಮ ವಹಿಸಿ ಎಂದರು.
    ಜಿಲ್ಲೆಯಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ರೈತರು ಸೇರಿ 1.92 ಲಕ್ಷ ರೈತರಿದ್ದಾರೆ. 1 ಹೆಕ್ಟೇರ್‌ಗೆ 8500 ರೂಪಾಯಿ ಬರ ಪರಿಹಾರ ಹಣ ನಿಗದಿಪಡಿಸಲಾಗಿದೆ. ಬರ ಪರಿಹಾರ ಹಣ ಪಡೆಯಲು ರೈತರು ಕಡ್ಡಾಯವಾಗಿ ಫೂಟ್ಸ್-ಐಡಿ ಮಾಡಿಸಿರಬೇಕು. ಹೀಗಾಗಿ ಜಿಲ್ಲೆಯ ನಾಲ್ಕು ತಾಲೂಕಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಜಿಲ್ಲಾ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು , ಅವರು ನೇರವಾಗಿ ರೈತರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಪ್ರೂಟ್ಸ್ ಐಡಿ ಮಾಡಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮಾಹಿತಿ ನೀಡಿದರು.
    ಅಧಿಕಾರಿಗಳು ಸಿದ್ದರಾಗಿರಿ: ಪ್ರಸ್ತುತ ತೀವ್ರವಾಗಿ ಕುಡಿಯುವ ನೀರಿನ ಅಭಾವ ಕಂಡುಬಂದಿಲ್ಲ, ಆದರೆ ಈಗ ಚಾಲ್ತಿಯಲ್ಲಿರುವ ಕೊಳವೆಬಾವಿಗಳನ್ನು ಪರಿಶೀಲಿಸಿ ಅಗತ್ಯ ಮೋಟಾರ್, ಪೈಪ್‌ಲೈನ್, ವಿದ್ಯುತ್ ಸೇರಿ ಸಣ್ಣಪುಟ್ಟ ಸಮಸ್ಯೆ ಪರಿಹರಿಸಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ಅವಶ್ಯವಿದ್ದಲ್ಲಿ ಖಾಸಗಿಯಾಗಿ ಕುಡಿಯುವ ನೀರು ಪೂರೈಕೆ ಮಾಡಲು ಸಿದ್ಧರಾಗಿರಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.
    45 ಸಾವಿರ ಕಿಟ್: ಜಿಲ್ಲೆಗೆ ಈ ವರ್ಷ 45 ಸಾವಿರ ಮೇವಿನ ಬೀಜದ ಮಿನಿಕಿಟ್ ಬಂದಿದ್ದು, ಪ್ರತಿ ಗ್ರಾಮದಲ್ಲಿ ನೀರಿನ ಲಭ್ಯತೆ ಇರುವ ರೈತರಿಗೆ ವಿತರಿಸಲಾಗುತ್ತಿದೆ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಕಾರ್ಯದರ್ಶಿ, ಬರ ಪರಿಸ್ಥಿತಿ ಇರುವುದರಿಂದ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗದಂತೆ ಕ್ರಮವಹಿಸಿ, ಗೋಶಾಲೆಗಳಲ್ಲಿ ಮೇವನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ, ಮೇವಿನ ಬೀಜ ಪಡೆದ ರೈತರ ಜತೆ ಒಡಂಬಡಿಕೆ ಮಾಡಿಕೊಂಡು ಪುನಃ ಬೆಳೆದ ಮೇವು ಖರೀದಿ ಮಾಡಲು ಪ್ರಯತ್ನಿಸಿ ಎಂದು ಹೇಳಿದರು.
    ಅನ್ನ ಭಾಗ್ಯ ಯೋಜನೆಯಡಿ 2,31,009 ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದು, ಈ ಪೈಕಿ 1,98,872 ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ 11,59,87,430 ಕೋಟಿ ರೂ.ನವೆಂಬರ್‌ವರೆಗೆ ಜಮೆಯಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
    ನರೇಗಾ ಯೋಜನೆಯಡಿ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ನರೇಗಾ ಕಾಮಗಾರಿಗಳು ತ್ವರಿತವಾಗಿ ಮುಗಿಸಿ ವರದಿ ನೀಡಿ ಎಂದರು. ಶಾಸಕರು ಹಾಗೂ ಸಂಸದರ ಅನುದಾನದಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ವರದಿ ಪರಿಶೀಲಿಸಿ, ಜನವರಿ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ವರದಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಮಾ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts