ಯಲಬುರ್ಗಾ: ವೃತ್ತಿಪರ ಶಾಮಿಯಾನ ಡೆಕೋರೇಟರ್ಸ್ ಧ್ವನಿ ಮತ್ತು ಬೆಳಕು ಪರಿಕರಗಳ ಮಾಲೀಕರು, ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀಶೈಲ ತಳವಾರ್‌ಗೆ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ತಾಲೂಕು ಡೆಕೋರೇಟರ್ಸ್ ಮತ್ತು ಸಪ್ಲಾಯರ್ಸ್ ಸಂಘ ಗುರುವಾರ ಮನವಿ ಸಲ್ಲಿಸಿತು.
ಸಂಘದ ಕಾರ್ಯದರ್ಶಿ ಬಸವರಾಜ ಗುಳಗುಳಿ ಮಾತನಾಡಿ, ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಆದೇಶವಿದೆ. ಇದರಿಂದ ಎಲ್ಲ ಕಾರ್ಯಕ್ರಮಗಳೂ ರದ್ದಾಗಿವೆ. ವೃತ್ತಿಪರ ಮಾಲೀಕರು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಬದುಕು ಸಾಗಿಸುವುದು ದುಸ್ತರವಾಗಿದೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದು ವ್ಯಾಪಾರ ನಡೆಸಲಾಗುತ್ತಿದೆ. ಸಭೆ, ಸಮಾರಂಭಗಳು ರದ್ದಾಗಿದ್ದರಿಂದ ಆರ್ಥಿಕ ತೊಂದರೆ ಎದುರಾಗಿದೆ. ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಫಕೀರಪ್ಪ ಉಪ್ಪಾರ್, ಯಮನೂರ್‌ಸಾಬ್, ರಾಜಶೇಖರ್, ಮರ್ದಾನ್‌ಸಾಬ್ ಕರಮುಡಿ ಇತರರು ಇದ್ದರು.