More

    ಮೀನುಗಾರರ ಉಳಿತಾಯ ಯೋಜನೆಗೆ ಗ್ರಹಣ

    ಗಂಗೊಳ್ಳಿ: ಕಷ್ಟದ ಸಮಯದಲ್ಲಿ ಮೀನುಗಾರರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ರೂಪಿಸಿದ್ದ ಉಳಿತಾಯ ಪರಿಹಾರ ಯೋಜನೆಗೆ ಗ್ರಹಣ ಹಿಡಿದಿದ್ದು, 2017ರಿಂದ ಸರ್ಕಾರ ಮೀನುಗಾರರಿಗೆ ಈ ಯೋಜನೆಯ ಬಾಕಿ ಮೊತ್ತವನ್ನು ಪಾವತಿ ಮಾಡಿಲ್ಲ.

    ಮಳೆಗಾಲದ ಕೆಲಸವಿಲ್ಲದ 57 ದಿನಗಳ ಅವಧಿಯಲ್ಲಿ ಮೀನುಗಾರರು ಸಣ್ಣ ಮೊತ್ತವನ್ನು ಪಡೆಯಲು ಅನುಕೂಲವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ರೂಪಿಸಿದ್ದ ಉಳಿತಾಯ ಪರಿಹಾರ ಯೋಜನೆ ಮೀನುಗಾರರ ಪಾಲಿಗೆ ವರದಾನವಾಗಿತ್ತು. ಮೀನುಗಾರಿಕೆ ನಡೆಯುವ ಎಂಟು ತಿಂಗಳು ಉಳಿತಾಯ ಮಾಡಿ ಮೀನುಗಾರಿಕೆ ಇಲಾಖೆಯ ಖಾತೆಗೆ ಜಮೆ ಮಾಡಿದ ಮೊತ್ತಕ್ಕೆ ಅಷ್ಟೇ ಮೊತ್ತದ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಬೇಕು. ಮೀನುಗಾರಿಕೆ ರಜೆಯ ಅವಧಿಯಲ್ಲಿ ಸಣ್ಣ ಮೀನುಗಾರರಿಗೆ ಆರ್ಥಿಕವಾಗಿ ಸಹಕಾರಿಯಾಗುವ ನಿಟ್ಟಿನಲ್ಲಿ ಜಾರಿಯಾದ ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ ಯೋಜನೆಯ ಕೋಟ್ಯಂತರ ರೂ. ಹಣ ಕಳೆದ ಮೂರು ವರ್ಷಗಳಿಂದ ಮೀನುಗಾರರಿಗೆ ಪಾವತಿಯಾಗಿಲ್ಲ. ಹೀಗಾಗಿ ಈ ಯೋಜನೆ ಬಹುತೇಕ ಸ್ಥಗಿತಗೊಂಡಿದ್ದು, ಮೀನುಗಾರರು ತಮಗೆ ಬರಲು ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.

    ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2017ನೇ ಸಾಲಿನಿಂದ 2019ರ ವರೆಗೆ ಮೂರು ವರ್ಷದ ಪರಿಹಾರ ಮೊತ್ತವನ್ನು ಸರ್ಕಾರ ಪಾವತಿ ಮಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಳೆದ ಆರು ತಿಂಗಳಿನಿಂದ ಮತ್ಸ್ಯಕ್ಷಾಮದ ಜತೆಗೆ ಕರೊನಾ ಮಹಾಮಾರಿಗೆ ಲಾಕ್‌ಡೌನ್‌ನಿಂದ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಉಳಿತಾಯ ಮಾಡಿ ಕಟ್ಟಿದ ಹಣ ಕೂಡ ಕೈಸೇರದಿರುವುದು ಮೀನುಗಾರರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
    ಸಂಕಷ್ಟದ ಈ ಕಾಲಘಟ್ಟದಲ್ಲಿ ಸರ್ಕಾರ ಮೀನುಗಾರರ ಬಾಕಿ ಹಣವನ್ನು ಬಿಡುಗಡೆ ಮಾಡಿ ಮೀನುಗಾರರಿಗೆ ನ್ಯಾಯ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

    ಮತ್ಸ್ಯ ಕ್ಷಾಮ, ಲಾಕ್‌ಡೌನ್‌ನಿಂದ ಸಮಸ್ಯೆ: ಪ್ರತಿಕೂಲ ಹವಾಮಾನ, ಮತ್ಸ್ಯ ಕ್ಷಾಮ, ಲೈಟ್ ಫಿಶಿಂಗ್ ನಿಷೇಧ ಮತ್ತಿತರ ಕಾರಣಗಳಿಂದ ಕಂಗೆಟ್ಟಿದ್ದ ಮೀನುಗಾರರಿಗೆ ಕೋವಿಡ್-19 ಬರಸಿಡಿಲಿನಂತೆ ಬಂದೆರಗಿದೆ. ಮೀನುಗಾರಿಕೆ ಇಲ್ಲದೆ ಗಂಗೊಳ್ಳಿ ಬಂದರು ಬಿಕೋ ಎನ್ನುತ್ತಿದ್ದು, ಬಡ ಮೀನುಗಾರ ಕಾರ್ಮಿಕರು ಮಹಿಳೆಯರು ಕೆಲಸ ಇಲ್ಲದೆ ಕಷ್ಟದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ತಲೆದೋರಿದೆ. ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಬಂದರಿನಲ್ಲಿ ಬೋಟುಗಳು ಕಳೆದ ಎರಡು ತಿಂಗಳಿನಿಂದ ಮೀನುಗಾರಿಕೆಗೆ ತೆರಳದೇ ದಡದಲ್ಲೇ ಲಂಗರು ಹಾಕಿವೆ. ಕರೊನಾ ವೈರಸ್ ಹಾವಳಿ ಮತ್ತು ಮತ್ಸ್ಯಕ್ಷಾಮಕ್ಕೆ ಮೀನುಗಾರರೆಲ್ಲ ತತ್ತರಿಸಿ ಹೋಗಿದ್ದಾರೆ.

    ಲಾಕ್‌ಡೌನ್ ಸಮಯದಲ್ಲಿ ಕೃಷಿ ಮತ್ತು ಇತರ ವರ್ಗದವರಿಗೆ ಸಾಲ ಬಡ್ಡಿ ಮನ್ನಾ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಮೂಲಕ ನ್ಯಾಯ ಒದಗಿಸುತ್ತಿರುವ ಸರ್ಕಾರ ಮತ್ಸ್ಯಕ್ಷಾಮ ಮತ್ತು ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಮೀನುಗಾರರಿಗೆ ಕೆಲವೊಂದು ಸೌಲಭ್ಯಗಳನ್ನು ಹಾಗೂ ಬಡ್ಡಿ ಮನ್ನಾದಂತಹ ಕಾರ್ಯಕ್ರಮಗಳನ್ನು ಘೋಷಿಸಬೇಕು. ಉಳಿತಾಯ ಪರಿಹಾರ ಯೋಜನೆಯ ಬಾಕಿ ಹಣವನ್ನು ಅತಿ ಶೀಘ್ರ ಪಾವತಿಸಿ ಮೀನುಗಾರರಿಗೆ ನೆರವಾಗಬೇಕು
    -ಸದಾಶಿವ ಖಾರ್ವಿ ಅಧ್ಯಕ್ಷರು, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts