More

    ಗೋಕರ್ಣ ತರಕಾರಿ ಗೆ ತರಹೇವಾರಿ ಸಮಸ್ಯೆ

    ಗೋಕರ್ಣ: ಗೋಕರ್ಣ ಮತ್ತು ಸುತ್ತಲಿನ ಕಡಲಂಚಿನ ಗ್ರಾಮಗಳಲ್ಲಿ ಬೆಳೆಯುವ ವೈವಿಧ್ಯಮಯ ತರಕಾರಿ ಗೆ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಬೇಡಿಕೆ ಇದೆ.

    ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುವ ವಾರದ ಸಂತೆಯಲ್ಲಿ ಇಲ್ಲಿನ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. ಗೋಕರ್ಣದ ಮಜ್ಜಿಗೆ ಮೆಣಸು, ಸಿಹಿ ಗೆಣಸು, ಸಿಹಿ ಈರುಳ್ಳಿ, ಹಸಿರು ತರಕಾರಿಗಳಾದ ಬಸಲೆ, ಕೆಂಪು ಮತ್ತು ಹಸಿರು ಹರಿಗೆ, ಕುಂಬಳ ಮತ್ತು ಬದನೆ ಶಾಕಾಹಾರಿಗಳಿಗೆ ಬಹು ಪ್ರಿಯ ಖಾದ್ಯವಾಗಿದೆ.

    ಹೆಸರಾದ ಸಾವಯವ ತರಕಾರಿ

    ಗೋಕರ್ಣದ ಸಮುದ್ರಕ್ಕೆ ಹೊಂದಿಕೊಂಡಿರುವ ಬೇಲೆ ಹಿತ್ತಲು, ಬಿಜ್ಜೂರು, ರುದ್ರಪಾದ, ಬಾವಿಕೊಡ್ಲ, ಹೊಸ್ಕೇರಿ, ಹಾರುಮಾಸ್ಕೇರಿ ಗ್ರಾಮಗಳು ಮಿಶ್ರ ತರಕಾರಿ ಬೆಳೆಗೆ ಹೆಸರುವಾಸಿ.

    ಒಂದೇ ಗದ್ದೆಯಲ್ಲಿ ವಿವಿಧ ಜಾತಿಯ ತರಕಾರಿಗಳನ್ನು ಒತ್ತಟ್ಟಿಗೆ ಬೆಳೆಯುವ ಪದ್ಧತಿಯನ್ನು ಇಲ್ಲಿ ಮಾತ್ರ ಅನುಸರಿಸಲಾಗುತ್ತಿದೆ.

    ಉಳಿದೆಡೆ ಕೃಷಿ ಮಾಡುವ ತರಕಾರಿಗಳಿಗಿಂತ ಈ ಭಾಗಗಳಲ್ಲಿ ಬೆಳೆಯುವ ತರಕಾರಿಗೆ ಪ್ರತ್ಯೇಕ ರುಚಿ ಇದೆ ಎಂಬುದು ಗ್ರಾಹಕರ ಅಭಿಪ್ರಾಯ.

    ಇಲ್ಲಿನ ತರಕಾರಿಗೆ ಸಾವಯವ ಗೊಬ್ಬರ ಮಾತ್ರ ನೀಡಲಾಗುತ್ತದೆ. ಸರಿಯಾದ ಸಮಯಕ್ಕೆ ನೀರುಣಿಸುವುದರಿಂದ ರುಚಿಯಾಗಿರುತ್ತವೆ ಎಂಬುದು ತಜ್ಞರ ಅಭಿಮತ.

    ಕ್ಷೀಣಿಸಿದ ತರಕಾರಿ ಕ್ಷೇತ್ರ

    ತೋಟಗಾರಿಕೆ ಇಲಾಖೆ ಅಂದಾಜಿನ ಮೇರೆಗೆ ಇಲ್ಲಿನ 550ಕ್ಕೂ ಅಧಿಕ ಹಾಲಕ್ಕಿ ಕುಟುಂಬಗಳು 208ರಿಂದ 250 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿಗೆ ಪ್ರಾಮುಖ್ಯ ನೀಡುತ್ತ ಬಂದಿವೆ. ಆದರೆ, ತರಕಾರಿ ಬೆಳೆಯುವ ಒಟ್ಟು ಕ್ಷೇತ್ರ ಕಳೆದ 2019ರಿಂದೀಚೆಗೆ ಅರ್ಧದಷ್ಟು ಕುಸಿದಿದೆ.

    25ರಿಂದ 35 ಹೆಕ್ಟೇರ್ ಗದ್ದೆಗಳಲ್ಲಿ ಬೆಳೆಯುತ್ತಿದ್ದ ವಿಶೇಷ ಸ್ವಾದದ ಮಜ್ಜಿಗೆ ಮೆಣಸಿನ ಕ್ಷೇತ್ರ ಕೇವಲ 20 ಎಕರೆಗೆ ಸೀಮಿತವಾಗಿದೆ. ಇದೇ ರೀತಿ ಸಿಹಿ ಈರುಳ್ಳಿಯೂ ಹೆಚ್ಚಿನ ಗದ್ದೆಗಳಿಂದ ಮಾಯವಾಗಿದೆ.

    ಹಿಂದೆ 4 ಸಾವಿರ ಟನ್‌ಗೂ ಹೆಚ್ಚಿನ ಬೇರೆ ಬೇರೆ ತರಕಾರಿ ಕೃಷಿ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಒಟ್ಟಾರೆ ತರಕಾರಿ ಸಲು ಶೇ. 75ರಷ್ಟು ಕುಸಿತವಾಗಿ ಅಂದಾಜು 1 ಸಾವಿರ ಟನ್ ಇಳುವರಿಗೆ ತೃಪ್ತಿಪಡುವಂತಾಗಿದೆ. ಚಂಡು ಈರುಳ್ಳಿ ಮಾರುಕಟ್ಟೆಯಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಮೆಣಸಿನ ಬೆಲೆ ಕಿಲೋಗೆ 60ರೂ. ಗಳಿಂದ 120 ರೂ.ಗೆ ಮುಟ್ಟಿದರೂ ಬೇಡಿಕೆಯಿದೆ.

    ಗೋಕರ್ಣ ತರಕಾರಿ ಗೆ ತರಹೇವಾರಿ ಸಮಸ್ಯೆ

    ಆದರೆ, ಖರೀದಿಗೆ ಸಿಗುತ್ತಿಲ್ಲ. ಬಸಲೆ, ಹರಿಗೆ, ಊರ ಮೂಲಂಗಿಯಿಂದ ತುಂಬಿರುತ್ತಿದ್ದ ಹಾಲಕ್ಕಿ ಮಹಿಳೆಯರ ಬುಟ್ಟಿಗಳು ಖಾಲಿ ಖಾಲಿಯಾಗಿವೆ. ಇನ್ನು ಸಿಹಿ ಗೆಣಸಂತೂ ರೈತರ ಮನೆಯಿಂದ ಹೊರಗೆ ಬರಲೇ ಇಲ್ಲ. ಹೊಸ ಪೀಳಿಗೆಯ ಯುವ ರೈತರಲ್ಲಿ ಕೃಷಿ ಮತ್ತು ತರಕಾರಿ ಬೆಳೆಯ ಬಗ್ಗೆ ನಿರಾಸಕ್ತಿ. ತರಕಾರಿ ಬೆಳೆಯಲು ಹೆಚ್ಚಿನ ಪರಿಶ್ರಮ ಬೇಕು. ಆದರೆ, ಬೆಲೆ ಕಡಿಮೆ ಇರುವುದರಿಂದ ಯುವಕರು ಬೇರೆ ಉದ್ಯೋಗದತ್ತ ಮುಖ ಮಾಡುತ್ತಿದ್ದಾರೆ.

    ಬೆಳೆ ಕುಸಿತಕ್ಕೆ ಕಾರಣಗಳು: ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರಕಾರ ಬೆಳೆ ಕುಸಿತಕ್ಕೆ ಹವಾಮಾನ ವೈಪರಿತ್ಯ, ರೋಗಗಳ ಕಾಟ, ಸ್ಥಳೀಯವಾಗಿ ಸಿಗುತ್ತಿದ್ದ ಬೀಜದ ಕೊರತೆ. ಇತ್ತೀಚೆಗೆ ಈರುಳ್ಳಿಗೆ ತಿರುಪು ರೋಗ ಕಂಡು ಬಂದಿದೆ. ಕುಮಟಾ ಬಳಿಯ ವನ್ನಳ್ಳಿಯ ಈರುಳ್ಳಿ ಬೀಜ ಕೊರತೆಯಿಂದ ರೈತರು ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ. ಗೋಕರ್ಣದ ಅಪರೂಪದ ಬಸಲೆಗೆ ಚುಕ್ಕೆ ರೋಗ ಬಂದಿದೆ. ಇದು ತೋಟಗಾರಿಕೆ ಇಲಾಖೆಗೆ ಸವಾಲಾಗಿದೆ.

    ಗೋಕರ್ಣ ಭಾಗದಲ್ಲಿ ಉಂಟಾಗಿರುವ ತರಕಾರಿ ರೋಗ ಉಳಿದೆಡೆಗಳಿಗಿಂತ ಭಿನ್ನವಾಗಿದೆ. ಇಲ್ಲಿನ ರೋಗಕ್ಕೆ ಬೇರೆಯದೇ ಹಿನ್ನೆಲೆ ಮತ್ತು ಕಾರಣಗಳಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ಈ ಬಗ್ಗೆ ಅಧ್ಯಯನ ಮಾಡಿ ಸಹಾಯ ಒದಗಿಸಲು ವಿನಂತಿಸಲಾಗಿದೆ. ಯುಕ್ತ ಸಂಶೋಧನೆಯ ನಂತರ ಇಲ್ಲಿನ ರೋಗ ಕಾರಣ ಪತ್ತೆಯಾಗಿ ಉತ್ತಮ ಬೆಳೆ ರೈತರ ಕೈಸೇರುವ ಆಶಾಭಾವವಿದೆ.
    – ಚೇತನ ನಾಯ್ಕ, ಕ್ಷೇತ್ರ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಕುಮಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts