More

    ಉರಿಯದ ದೀಪ ಅಪಾಯದ ಕೂಪ

    ಹರೀಶ್ ಮೋಟುಕಾನ ಮಂಗಳೂರು

    ಪಂಪ್‌ವೆಲ್ ಮೇಲ್ಸೇತುವೆ ಜನಸಂಚಾರಕ್ಕೆ ಮುಕ್ತಗೊಂಡು ಒಂದೂವರೆ ವರ್ಷ ಆಗುತ್ತ್ತ ಬಂದರೂ ಮೇಲ್ಸೇತುವೆಯಲ್ಲಿ ಬೀದಿದೀಪಗಳಿಗೆ ಉರಿಯುವ ಭಾಗ್ಯ ಸಿಕ್ಕಿಲ್ಲ. ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮನ್ವಯ ಕೊರತೆಯಿಂದ ಪಂಪ್‌ವೆಲ್ ಮೇಲ್ಸೇತುವೆ ರಾತ್ರಿ ವೇಳೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ಪಂಪ್‌ವೆಲ್ ಮೇಲ್ಸೇತುವೆ ಮತ್ತು ರಸ್ತೆ ಒಟ್ಟು 1.1 ಕಿ.ಮೀ ಉದ್ದ ಮತ್ತು 20 ಮೀ. ಅಗಲ ಹೊಂದಿದೆ. 2020ರ ಜ.31ರಂದು ಉದ್ಘಾಟನೆಗೊಂಡಿತ್ತು. ಉದ್ಘಾಟನೆ ಸಂದರ್ಭ ಬೀದಿದೀಪ ಅಳವಡಿಸಲಾಗಿತ್ತು. ಆದರೆ ಇಂದಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಸಂಪರ್ಕ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಥಳೀಯಾಡಳಿತ ಕಡೆಗೆ ಹಾಗೂ ಮನಪಾ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಕಡೆಗೆ ಬೊಟ್ಟು ಮಾಡುತ್ತಿವೆ. ಇಲ್ಲಿ ದೈನಂದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಕಾಸರಗೋಡು ಕಡೆಯಿಂದ ಉಡುಪಿ, ಕುಂದಾಪುರ ನೇರ ಸಂಪರ್ಕಕ್ಕೆ ಇದೇರಸ್ತೆ ಬಳಕೆಯಾಗುತ್ತದೆ. ರಾತ್ರಿ ವೇಳೆಯೂ ಅನೇಕ ವಾಹನಗಳು ಸಂಚರಿಸುತ್ತಿರುತ್ತವೆ.

    ಅವೈಜ್ಞಾನಿಕ ರಸ್ತೆ: ಪಂಪ್‌ವೆಲ್ ಮೇಲ್ಸೇತುವೆ ವಾಹನ ಸ್ನೇಹಿಯಾಗಿಲ್ಲ ಎಂಬ ದೂರು ಈ ಹಿಂದೆಯೇ ಕೇಳಿಬಂದಿತ್ತು. ಮೇಲ್ಸೇತುವೆಯಿಂದ ಉಜ್ಜೋಡಿ ಅಂಡರ್‌ಪಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮತಟ್ಟಾಗಿಲ್ಲ. ಅದು ತಗ್ಗಾಗಿದ್ದಲ್ಲದೆ ತಿರುವು ಕೂಡ ಇದೆ. ದಕ್ಷಿಣ ದಿಕ್ಕಿನ ಉಜ್ಜೋಡಿಯಲ್ಲಿ ಮತ್ತು ಉತ್ತರ ದಿಕ್ಕಿನಲ್ಲಿ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಬಳಿಯಿಂದ ಆಚೆಗೆ ಎತ್ತರ ಪ್ರದೇಶ ಇದ್ದು, ಈ ಎತ್ತರ ಭಾಗದಿಂದ ವಾಹನಗಳು ವೇಗವಾಗಿ ಬರುವುದರಿಂದ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಕಾರಣವಾಗುತ್ತಿದೆ.

    ಅಪಘಾತಕ್ಕೆ ಕಾರಣ: ಪಂಪ್‌ವೆಲ್ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಂಡು ವಾರ ಕಳೆಯುವುದರೊಳಗೆ ಅಪಘಾತ ನಡೆದಿತ್ತು. ನಂತೂರಿನಿಂದ ತೊಕ್ಕೊಟ್ಟು ಕಡೆ ವೇಗವಾಗಿ ಚಲಿಸುತ್ತಿದ್ದ ಆಲ್ಟೋ ಕಾರು ನಿಯಂತ್ರಣ ತಪ್ಪಿ ಬಲಗಡೆ ಇದ್ದ ಡಿವೈಡರ್ ದಾಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಡಸ್ಟರ್ ಕಾರಿಗೆ ಡಿಕ್ಕಿಯಾಗಿತ್ತು. ಆ ಬಳಿಕ ಸರಣಿ ಅಪಘಾತ ಸಂಭವಿಸಿತ್ತು. ನಂತೂರು ಕಡೆಯಿಂದ ಪಂಪ್‌ವೆಲ್ ಕಡೆಗೆ ಬರುತ್ತಿದ್ದ ಲಾರಿ ಎದುರಿಗೆ ಹೋಗುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಲು ಯತ್ನಿಸಿ ಕಾರಿಗೆ ಡಿಕ್ಕಿಯಾಗಿತ್ತು. ಮೂವರು ಗಾಯಗೊಂಡಿದ್ದರು. ಇಲ್ಲಿ ಸಣ್ಣಪುಟ್ಟ ಅಪಘಾತಗಳು ನಿರಂತರ ನಡೆಯುತ್ತಲೇ ಇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಮಾತ್ರ ಬೀದಿದೀಪ ಉರಿಯದೇ ಇರುವುದಲ್ಲ. ಕುಂಟಿಕಾನ, ಕೊಟ್ಟಾರ ಚೌಕಿ, ಕೂಳೂರು, ಸುರತ್ಕಲ್ ಮೇಲ್ಸೇತುವೆಗಳಲ್ಲೂ ಉರಿಯುತ್ತಿಲ್ಲ. ಇದರಿಂದ ಸರ್ವೀಸ್ ರಸ್ತೆಯಲ್ಲೂ ಕತ್ತಲೆ ಆವರಿಸಿದೆ. ರಾತ್ರಿ ವೇಳೆ ಗುಂಡಿಗಳು ಕಾಣಿಸುವುದೇ ಇಲ್ಲ. ಮಹಾನಗರ ಪಾಲಿಕೆ ಮತ್ತು ಹೆದ್ದಾರಿ ಅಧಿಕಾರಿಗಳು ತುರ್ತು ಗಮನ ನೀಡಬೇಕು.

    ಜಿ.ಗೋಪಾಲಕೃಷ್ಣ ಭಟ್
    ಸಾಮಾಜಿಕ ಕಾರ್ಯಕರ್ತ

    ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಬೀದಿದೀಪ ಉರಿಯದ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು. ಮಳೆಗಾಲದಲ್ಲಿ ಬೀದಿದೀಪಗಳು ಉರಿಯುವುದು ಅವಶ್ಯವಿದ್ದು, ಈ ಸಮಸ್ಯೆ ಶೀಘ್ರ ಪರಿಹರಿಸಲು ಪ್ರಯತ್ನಿಸಲಾಗುವುದು.

    ಪ್ರೇಮಾನಂದ ಶೆಟ್ಟಿ
    ಮೇಯರ್ ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts