More

    ಅಂಚೆಯಣ್ಣನ ವೇತನಕ್ಕೆ ಕನ್ನ: ಗುತ್ತಿಗೆ ನೌಕರರಿಗೆ ಏಜೆನ್ಸಿಗಳ ಕಿರುಕುಳ; ತಿಂಗಳಿಗೆ 5000 ರೂ. ಕಮೀಷನ್..

    ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ನೇಮಕಗೊಳ್ಳುವ ಹೊರ ಗುತ್ತಿಗೆ ನೌಕರರಿಗೆ ಕಡಿಮೆ ವೇತನ, ಹೆಚ್ಚಿನ ಅವಧಿಯ ಕೆಲಸ, ಇನ್ನಿತರ ಶೋಷಣೆಗಳ ಜತೆಗೀಗ ಸಂಬಳದಲ್ಲಿ ಕಮಿಷನ್ ವಸೂಲಿ ದಂಧೆಯೂ ಆರಂಭವಾಗಿದೆ. ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತದ ಜನರಲ್ ಪೋಸ್ಟ್ ಆಫೀಸ್ (ಜಿಪಿಒ) ಸೇರಿ ವಿವಿಧ ಅಂಚೆ ಕಚೇರಿಗಳ ಹೊರಗುತ್ತಿಗೆ ನೌಕರರಿಂದ ಪ್ರತಿತಿಂಗಳು ಲಕ್ಷಾಂತರ ರೂ. ವಸೂಲಿ ಮಾಡುತ್ತಿರುವ ವಿಚಾರ ಬಹಿರಂಗವಾಗಿದೆ. ರಾಜಭವನ ರಸ್ತೆಯ ಜಿಪಿಒ, ರೈಲ್ವೆ ಮೇಲ್ ಸರ್ವೀಸ್(ಆರ್​ಎಂಎಸ್) ಹಾಗೂ ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ವೀಪರ್, ಹೌಸ್ ಕೀಪಿಂಗ್, ವಾಚ್​ವುನ್ ಮತ್ತು ಡೇಟಾ ಎಂಟ್ರಿ ಸೇರಿ 300ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಈ ನೌಕರರನ್ನು ಅಗ್ಗದ ಆಳುಗಳಾಗಿ ದುಡಿಸಿಕೊಳ್ಳುತ್ತಿರುವ ಖಾಸಗಿ ಏಜೆನ್ಸಿಗಳು ಸರಿಯಾಗಿ ವೇತನ ನೀಡದೆ ಶೋಷಿಸುತ್ತಿರುವುದರ ಜತೆಗೆ ಪ್ರತಿತಿಂಗಳು ಪ್ರತಿಯೊಬ್ಬ ಗುತ್ತಿಗೆ ನೌಕರನಿಂದ 5000 ರೂ. ಕಮೀಷನ್ ಪಡೆಯಲಾಗುತ್ತಿದೆ.

    ಕಮೀಷನ್ ಕೊಡದಿದ್ದರೆ ಕೆಲಸದಿಂದ ತೆಗೆಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಜಿಪಿಒದಲ್ಲಿ 10 ವರ್ಷದ ಹಿಂದೆ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಕೆಲಸಕ್ಕೆ ಸೇರಿಕೊಂಡಿದ್ದ ವ್ಯಕ್ತಿಯೇ ಈಗ ಸೂಪರ್​ವೈಸರ್ ಎಂದು ಹೇಳಿಕೊಂಡು ವಸೂಲಿ ಮಾಡುತ್ತಿದ್ದಾನೆ. ಈ ಕಿರುಕುಳ ಹಾಗೂ ಬ್ಲಾ್ಯಕ್​ವೆುೕಲ್ ವಸೂಲಿಯ ಬಗ್ಗೆ ಹೊರ ಗುತ್ತಿಗೆ ನೌಕರರೇ ದೂರು ನೀಡಿದ್ದಾರೆ.

    37,000 ಹೊರಗುತ್ತಿಗೆ ನೌಕರರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ನೂರಾರು ಏಜೆನ್ಸಿಗಳ ಮೂಲಕ 37 ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 16 ಸಾವಿರಕ್ಕೂ ಹೆಚ್ಚು ಮಹಿಳಾ ನೌಕರರಿದ್ದು ಹೆಚ್ಚಾಗಿ ಸ್ವೀಪರ್, ಹೌಸ್ ಕೀಪಿಂಗ್ ಮತ್ತು ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಇಲಾಖೆಗಳಲ್ಲೂ ಹೊರ ಗುತ್ತಿಗೆ ನೌಕರರಿಂದ ಪ್ರತಿ ತಿಂಗಳು ಕಮೀಷನ್ ವಸೂಲಿ ಮಾಡಲಾಗುತ್ತಿದೆ. ಪ್ರತಿಯೊಂದು ಇಲಾಖೆಯಲ್ಲೂ ವಸೂಲಿಗಾಗಿಯೇ ಒಬ್ಬರನ್ನು ನೇಮಿಸಲಾಗಿರುತ್ತದೆ ಎಂದು ಹೇಳಲಾಗುತ್ತಿದೆ.

    ಅಧಿಕಾರಿಗಳ ಕೃಪಾಕಟಾಕ್ಷ: ಸೇವಾ ಶುಲ್ಕ ಷರತ್ತಿನಡಿ ಸಿಬ್ಬಂದಿ ಪೂರೈಸುವ ಏಜೆನ್ಸಿಗಳು, ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿವೆ. ನೌಕರರ ವೇತನದಲ್ಲಿ ದೊಡ್ಡ ಮೊತ್ತದ ಮೊತ್ತ ವಸೂಲಿ ಮಾಡಲಾಗುತ್ತಿದೆ. ಪಿಎಫ್, ಇಎಸ್​ಐ ಹೆಸರಿನಲ್ಲಿ ಕಡಿತ ಮಾಡುವ ಮೊತ್ತದಲ್ಲಿ ಸ್ವಲ್ಪ ಭಾಗವನ್ನು ಏಜೆನ್ಸಿಯು ಜಿಪಿಒದ ಕೆಲ ಅಧಿಕಾರಿಗಳಿಗೂ ನೀಡುತ್ತಿವೆ. ಹೀಗಾಗಿ ದೂರು ಕೊಟ್ಟರೂ ಅಧಿಕಾರಿಗಳು ಕ್ರಮ ಕೈಗೊಳ್ಳು ತ್ತಿಲ್ಲ ಎಂದು ನೌಕರರು ಆರೋಪಿಸಿದ್ದಾರೆ.

    ಸುಳ್ಳು ಲೆಕ್ಕ ತೋರಿಸಿ ಮೋಸ: ನಿಗದಿಗಿಂತ ಕಡಿಮೆ ನೌಕರರನ್ನು ನೇಮಿಸಿಕೊಳ್ಳುವ ಏಜೆನ್ಸಿಗಳು ಅದಕ್ಕಿಂತ ಹೆಚ್ಚಿನ ಸಂಖ್ಯೆ ನೌಕರರು ಕೆಲಸ ಮಾಡುತ್ತಿರುವುದಾಗಿ ಹೇಳಿ ವೇತನದ ಹಣ ಪಡೆಯುತ್ತಿವೆ. ಮೂರು ಪಾಳಿಯ ಕೆಲಸವನ್ನು ಒಂದೂವರೆ ಪಾಳಿಯಂತೆ ಇಬ್ಬರಿಂದ ಮಾಡಿಸಿ, ಮೂವರು ನೌಕರರ ವೇತನವನ್ನು ಜೇಬಿಗಿಳಿಸುತ್ತಿವೆ. ಅಂಚೆ ಇಲಾಖೆ ಮತ್ತು ಏಜೆನ್ಸಿ ನಡುವಿನ ಒಪ್ಪಂದದಂತೆ ನೇಮಕಗೊಂಡವರ ಮೇಲೆ ಸರ್ಕಾರದ ಅಧಿಕಾರಿಗಳಿಗೆ ಹಿಡಿತ ಇಲ್ಲದಿರುವುದರಿಂದ ಈ ದಂಧೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿರುವಂತಿದೆ.

    ಬೇನಾಮಿ ಹೆಸರಿನಲ್ಲಿ ಏಜೆನ್ಸಿ: ಜಿಪಿಒ ಕಚೇರಿಗೆ ನೌಕರರನ್ನು ಪೂರೈಸಲು ಹಲವು ವರ್ಷಗಳಿಂದ ಬೇನಾಮಿ ಹೆಸರಿನಲ್ಲಿ ಏಜೆನ್ಸಿ ಪಡೆಯಲಾಗುತ್ತಿದೆ. ಪ್ರತಿ ತಿಂಗಳು ಒಬ್ಬ ನೌಕರನಿಂದ 5 ಸಾವಿರ ರೂ.ನಂತೆ ತಿಂಗಳಿಗೆ 15 ಲಕ್ಷ ರೂ. ಕಮಿಷನ್ ವಸೂಲಿಯಾಗುತ್ತಿದೆ. ಏಜೆನ್ಸಿ ಅವಧಿ ಮುಗಿದ ಮೇಲೆ ಗುತ್ತಿಗೆ ನೌಕರರಿಗೆ ಕಡ್ಡಾಯವಾಗಿ ಇಪಿಎಫ್ ಹಣ ವಾಪಸ್ ನೀಡಬೇಕು. ಆದರೆ, ಇದರಲ್ಲೂ ವಂಚನೆ ನಡೆಯುತ್ತಿದ್ದು, 40 ಸಾವಿರ ರೂ. ಪಿಎಫ್ ಹಣವಿದ್ದರೆ ಕೇವಲ 2 ರಿಂದ 3 ಸಾವಿರ ರೂ. ಮಾತ್ರ ಕೊಟ್ಟು ಉಳಿದ ಹಣವೂ ಏಜೆನ್ಸಿಗಳ ಪಾಲಾಗುತ್ತಿದೆ. ಹಣ ಕೊಡದಿರುವುದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕಲಾಗುತ್ತಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಾರೆ.

    ವಸೂಲಿ ಹೇಗೆ?

    • ಲಂಚ ಪಡೆಯುವ ಅಧಿಕಾರಿಗಳಿಂದ ತಮಗೆ ಬೇಕಾದ ಏಜೆನ್ಸಿಗೆ ಟೆಂಡರ್ ಹಂಚಿಕೆ 
    • ನೌಕರರ ವೇತನ ದಲ್ಲಿ ಮಾಸಿಕ ತಲಾ 5000 ರೂ.ನಂತೆ ವಸೂಲಿ
    • ಕಮೀಷನ್ ನೀಡದಿದ್ದರೆ ಸಂಬಳಕ್ಕೆ ತಡೆ, ನೌಕರರ ವಜಾ

    ಸಮಸ್ಯೆಗಳೇನು?

    • ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿದರೂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಇರುವುದಿಲ್ಲ.
    • ಇಪಿಎಫ್ ಹಾಗೂ ಇಎಸ್​ಐ ಸೌಲಭ್ಯಗಳಿದ್ದರೂ ಏಜೆನ್ಸಿಗಳು ನೌಕರರಿಗೆ ಸೌಲಭ್ಯ ಕೊಡದೆ ವಂಚಿಸುತ್ತಿವೆ.
    • ಕನಿಷ್ಠ ವೇತನಕ್ಕೆ ಆದೇಶಿಸಿದ್ದರೂ ಕಡಿಮೆ ವೇತನ, ಹೆಚ್ಚಿನ ಅವಧಿಗೆ ಕೆಲಸ

    ಆಡಿಯೋ-ವಿಡಿಯೋ ಲಭ್ಯ: ಕಮಿಷನ್ ನೀಡುವಂತೆ ನೌಕರರಿಗೆ ಸೂಪರ್​ವೈಸರ್ ಬೇಡಿಕೆ ಇಟ್ಟಿರುವ ಆಡಿಯೋ-ವಿಡಿಯೋ ವಿಜಯವಾಣಿಗೆ ಲಭ್ಯವಾಗಿದೆ. ಹಣ ಕೊಟ್ಟರೆ ಕೆಲಸದಿಂದ ತೆಗೆಸುವುದಿಲ್ಲ. ಎಲ್ಲವನ್ನೂ ಬರೆದುಕೊಟ್ಟರೆ ಹಿಂಬಾಕಿ ಕೊಡಿಸುತ್ತೇನೆ. ಇನ್ನೊಂದು ಏಜೆನ್ಸಿಗೆ ಬೇರೆ ಕಡೆ ಟೆಂಡರ್ ಆಗುತ್ತದೆ. ಅಲ್ಲಿಯೂ ಕೆಲಸ ಕೊಡಿಸುವೆ ಎಂದು ವಿಡಿಯೋದಲ್ಲಿ ನೌಕರರ ಜತೆ ಮಾತಾಡಿದ್ದಾರೆ. ಈ ತಿಂಗಳ ಕಮಿಷನ್ ಕೊಡಲಾಗದು ಎಂದು ಸಿಬ್ಬಂದಿ ಹೇಳಿದರೆ, ‘ನಮ್ಮ ಓನರ್… ಚಪ್ಪಲಿಯಲ್ಲಿ ಹೊಡೆಯುತ್ತೇನೆ….. ಕಮಿಷನ್ ಕೊಡಲೇಬೇಕು… ಎಂಬೆಲ್ಲ ಮಾತುಗಳು ರೆಕಾರ್ಡ್ ಆಗಿವೆ.

    ನಿರೀಕ್ಷೆ ಗರಿಗೆದರಿಸುತ್ತಿರುವ ‘ವಿಜಯಾನಂದ’ ಚಿತ್ರ; ಡಾ.ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ- ಕ್ಯಾರೆಕ್ಟರ್ ಇಂಟ್ರೋ ರಿಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts