More

    ಸಕಾಲ ನೋಂದಣಿಗೆ ಪರದಾಟ

    – ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
    ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ (ಸಕಾಲ) 2011ರಡಿ ರಾಜ್ಯದ 6021 ಗ್ರಾಮ ಪಂಚಾಯಿತಿಗಳಲ್ಲಿ ಸಕಾಲ ಸೇವೆ ಜಾರಿಗೊಳಿಸಿದ್ದು ಇದರಲ್ಲಿ 11 ಸೇವೆಗಳನ್ನು ಸಕಾಲ ತಂತ್ರಾಂಶದಲ್ಲೇ ನೋಂದಣಿ ಮಾಡಿಕೊಂಡು ಜಿಎಸ್‌ಸಿ ಸಂಖ್ಯೆ ನೀಡಬೇಕು ಎಂಬುದು ಸರ್ಕಾರದ ಆದೇಶ. ಆದರೆ ಪಂಚಾಯಿತಿ ಖಾತೆಗಳಾದ 9/11ಎ, 11ಬಿ ನೋಂದಣಿಗೆ ಪಂಚತಂತ್ರ ತಂತ್ರಾಂಶದಲ್ಲಿ ಅವಕಾಶ ನೀಡದೆ ಸರ್ಕಾರ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 11 ಸೇವೆಗಳನ್ನು ಸಕಾಲದಲ್ಲಿಯೇ ನೋಂದಣಿ ಮಾಡಲು ಪಂಚಾಯತ್‌ರಾಜ್ ಇಲಾಖೆ ನಿರ್ದೇಶಕರು ಫೆ.3ರಂದು ಆದೇಶ ನೀಡಿದ್ದಾರೆ. ಸಕಾಲ ನೋಂದಣಿ ಮಾಡದೆ, ಡಿಜಿಟಲ್ ಸಹಿ ಇಲ್ಲದೆ ನೀಡುವ ಪ್ರಮಾಣಪತ್ರಗಳು ಅಮಾನ್ಯ. ನಿಯಮ ಉಲ್ಲಂಘಿಸುವ ಪಿಡಿಒಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿರುವ ಸರ್ಕಾರ, ನಿಯಮ ಮಾಡಿ ಕೈತೊಳೆದುಕೊಂಡು ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಪಂಚಾಯಿತಿ ಖಾತೆಗಳಾದ 9/11ಎ, 11ಬಿಗಳ ನೋಂದಣಿಗೆ ಪಂಚತಂತ್ರ ತಂತ್ರಾಂಶದಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ಪಂಚಾಯಿತಿ ಖಾತೆಗಳನ್ನು ಹೊಂದಲು ಗ್ರಾಮ ಪಂಚಾಯಿತಿಗೆ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲು ಪಿಡಿಒಗಳು ಹಿಂದೇಟು ಹಾಕುತ್ತಿದ್ದು ಸಕಾಲದಲ್ಲಿ ನೋಂದಣಿಗೆ ಸಾಧ್ಯವಿಲ್ಲ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ.

    ಗೊಂದಲದಲ್ಲಿ ಅಧಿಕಾರಿಗಳು, ಜನರಿಗೆ ಕಷ್ಟ: ನಮೂನೆ 9/11ಎ, 11ಬಿ ಪಡೆಯಲು ಅರ್ಜಿಯನ್ನು ಕೊಂಡೊಯ್ದರೆ ಗ್ರಾಪಂಗಳಲ್ಲಿ ಸ್ವೀಕರಿಸುತ್ತಿಲ್ಲ. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ಅರ್ಜಿಗಳನ್ನು ಅನುಮೋದನೆಗೆ ಇಡಬೇಕಿರುವುದರಿಂದ ಅರ್ಜಿ ಸ್ವೀಕೃತವಾಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಆದೇಶ ನೀಡುವ ಮೊದಲು ಸೂಕ್ತ ಸಿದ್ಧತೆ ಇಲ್ಲದೆ ಜನರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಅಧಿಕಾರಿಗಳು ಸ್ಪಷ್ಟ ಮಾಹಿತಿ ಇಲ್ಲದೆ ಗೊಂದಲಕ್ಕೀಡಾಗಿದ್ದು ಜನರ ಅರ್ಜಿಗಳಿಗೆ ಸ್ವೀಕೃತಿಯನ್ನೇ ನೀಡುತ್ತಿಲ್ಲ.

    ಸಕಾಲದಲ್ಲಿ ನಮೂನೆ 9/11ಎ ಮತ್ತು 11ಬಿ ಲಾಗಿನ್ ಡಿ ಆ್ಯಕ್ಟಿವೇಟ್ ಆಗಿದೆ. ಇದರಿಂದ ಸಕಾಲದಡಿ ಅರ್ಜಿ ಸ್ವೀಕೃತಿಗೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಪರ‌್ಯಾಯ ವಿಧಾನದ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು.
    ಪ್ರೀತಿ ಗೆಹ್ಲೋಟ್, ಸಿಇಒ, ಜಿಪಂ ಉಡುಪಿ

    ಸಕಾಲದಲ್ಲಿ ಲಾಗಿನ್ ನೀಡದೆ, ಅರ್ಜಿ ಸ್ವೀಕೃತಿಗೆ ಸಕಾಲ ಕಡ್ಡಾಯ ಮಾಡಿರುವುದು ಸರಿಯಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಅಥವಾ ಪರ‌್ಯಾಯ ಮಾರ್ಗ ಒದಗಿಸಬೇಕು. ಕಡ್ಡಾಯವಾಗಿ 11ಬಿ ಖಾತೆಗಳನ್ನು ಸ್ವಯಂ ಪ್ರೇರಿತವಾಗಿ ಗ್ರಾಪಂ ಒದಗಿಸಬೇಕು. ತಕರಾರು ಇರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಎಲ್ಲ 9/11ಎ ಅರ್ಜಿಗಳನ್ನು ಪಿಡಿಒ ಅವರ ಹಂತದಲ್ಲೇ ಇತ್ಯರ್ಥಪಡಿಸಬೇಕು.
    ಸುಧಾಕರ ಪೂಜಾರಿ, ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts