More

    ನಂಜನಗೂಡಿನಲ್ಲಿ ಫುಟ್‌ಪಾತ್ ಅತಿಕ್ರಮಣದಿಂದ ಸಮಸ್ಯೆ

    ನಂಜನಗೂಡು: ದಕ್ಷಿಣ ಕಾಶಿ, ಪ್ರವಾಸಿ ತಾಣ, ಕೈಗಾರಿಕೆಗಳ ತವರೂರು… ಹೀಗೆ ನಾನಾ ರೀತಿಯಲ್ಲಿ ಹೆಸರುವಾಸಿಯಾಗಿರುವ ನಂಜನಗೂಡು ನಗರ ಪ್ರದೇಶದಲ್ಲಿ ಸಾರ್ವಜನಿಕರು ಹಾಗೂ ಸವಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಫುಟ್‌ಪಾತ್ ತೆರವು ಎಂಬ ಪ್ರಹಸನಕ್ಕೆ ಮುಕ್ತಿಯೇ ಸಿಕ್ಕಿಲ್ಲ.

    ನಗರದ ಜನನಿಬಿಡ ಹಾಗೂ ವಾಣಿಜ್ಯ ಕೇಂದ್ರವಾಗಿರುವ ಬಜಾರ್, ರಾಷ್ಟ್ರಪತಿ ರಸ್ತೆ, ಅಂಗಡಿ ಬೀದಿ, ಎಂಜಿಎಸ್ ರಸ್ತೆಯಲ್ಲಿ ಫುಟ್‌ಪಾತ್‌ಗಳನ್ನು ಅಂಗಡಿ ಮಾಲೀಕರು, ವರ್ತಕರು ಅತಿಕ್ರಮಿಸಿಕೊಂಡಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲೇ ಓಡಾಡುವಂತಾಗಿದೆ. ಇದರಿಂದ ನಿತ್ಯ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.

    ಇನ್ನು ನಗರಸಭೆ ಅನೇಕ ಬಾರಿ ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ಮುಂದಾಗಿ ವಿಫಲವಾಗಿರುವ ನಿದರ್ಶನಗಳೂ ಕಣ್ಮುಂದಿವೆ. ಆದರೂ ಮೇಲಧಿಕಾರಿಗಳ ಆದೇಶಾನುಸಾರ ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ಮುಂದಾಗಿ ನಗರಸಭೆ ಅಧಿಕಾರಿಗಳು ಭ್ರಮನಿರಸನಕ್ಕೆ ಒಳಗಾಗಿದ್ದಾರೆ. ಅಂತೆಯೆ, ನ.9ರಂದು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬಜಾರ್ ರಸ್ತೆ, ಅಂಗಡಿ ಬೀದಿಯಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ತೆರವು ಕೈಗೊಂಡ ಮೂರೇ ದಿನದಲ್ಲಿ ಮತ್ತೆ ಅತಿಕ್ರಮಿಸಿಕೊಳ್ಳಲಾಗಿದ್ದು, ಉದ್ದೇಶಿತ ತೆರವು ಕಾರ್ಯಾಚರಣೆ ಸಾಕಾರಗೊಂಡಿಲ್ಲ.

    ವರ್ತಕರಿಂದ ಅತಿಕ್ರಮಣ: ನಗರದ ಪ್ರಮುಖ ಬಜಾರ್ ರಸ್ತೆ, ಎಂಜಿಎಸ್ ರಸ್ತೆ, ರಾಷ್ಟ್ರಪತಿ ರಸ್ತೆಯಲ್ಲಿ ಸುಸಜ್ಜಿತ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ವ್ಯಾಪಾರ ವಹಿವಾಟು ಕೇಂದ್ರವಾಗಿರುವ ಬಜಾರ್ ರಸ್ತೆ ನಿತ್ಯ ಜನಜಂಗುಳಿಯಿಂದ ಕೂಡಿರುತ್ತದೆ. ಮೊದಲೇ ಕಿರಿದಾಗಿರುವ ರಸ್ತೆಯಲ್ಲಿ ಫುಟ್‌ಪಾತ್‌ಗಳನ್ನು ವರ್ತಕರು, ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲೇ ಓಡಾಡುವಂತಾಗಿದೆ. ಇದರಿಂದ ಲಘು ವಾಹನ ಸವಾರರು ಕೂಡ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ವಾರದ ಹಿಂದೆಯಷ್ಟೇ ತೆರವಿಗೆ ಮುಂದಾಗಿ ವರ್ತಕರಿಗೆ ಬಿಸಿ ಮುಟ್ಟಿಸಿದ್ದರು. ಆದರೆ, ಮೂರ‌್ನಾಲ್ಕು ದಿನಗಳ ಬಳಿಕ ಮತ್ತೆ ಯಥಾಸ್ಥಿತಿಗೆ ಮರಳಿದೆ. ಇನ್ನು ರಾಷ್ಟ್ರಪತಿ ರಸ್ತೆ, ಎಂಜಿಎಸ್ ರಸ್ತೆಯಲ್ಲೂ ಫುಟ್‌ಪಾತ್ ತೆರವು ಮಾಡುವುದಾಗಿ ಹೇಳಿದ್ದ ನಗರಸಭೆ ಅಧಿಕಾರಿಗಳು ದೀಪಾವಳಿ ಹಬ್ಬದ ನೆಪ ಹೇಳಿ ಕಾರ್ಯಾಚರಣೆ ಮುಂದೂಡಿದ್ದಾರೆ.

    ಅಧಿಕಾರಿಗಳ ಜಾಣಕುರುಡುತನ: ಇನ್ನು ಫುಟ್‌ಪಾತ್ ತೆರವು ಕಾರ್ಯಾಚರಣೆ ಮಾಡುವಾಗ ನಗರಸಭೆ ಅಧಿಕಾರಿಗಳು ವರ್ತಕರು, ವ್ಯಾಪಾರಿಗಳನ್ನು ವಿಶ್ವಾಸಕ್ಕೆ ಪಡೆದು ತೆರವಿಗೆ ಮುಂದಾದರೆ ಬಹುಶಃ ಎಲ್ಲರೂ ಸಹಕರಿಸುತ್ತಾರೆ ಎಂಬ ಮಾತಿದೆ. ಆದರೆ, ನಗರಸಭೆಯಲ್ಲಿರುವ ಕೆಳಹಂತದ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನೇ ನೆಪ ಮಾಡಿಕೊಂಡು ಹಣ ಪೀಕಿಸಲು ನೆರಳಿಗಾಗಿ ಹಾಕಿಕೊಳ್ಳುವ ಛಾವಣಿ ತೆಗೆಯುವಂತೆ ಹಾಗೂ ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಪೀಡಿಸುತ್ತಾರೆ ಎಂಬ ಆರೋಪಗಳೂ ವರ್ತಕರಿಂದ ಕೇಳಿಬರುತ್ತಿವೆ. ಇದರಿಂದಾಗಿಯೇ ನಗರಸಭೆ ಅಧಿಕಾರಿಗಳು ಹಾಗೂ ವರ್ತಕರ ನಡುವೆ ಸಮನ್ವಯತೆ ಕಂಡುಕೊಳ್ಳಲಾಗದೆ ಫುಟ್‌ಪಾತ್ ತೆರವು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

    ರಸ್ತೆಬದಿ ವ್ಯಾಪಾರಿಗಳ ಚಿಂತೆ: ಇನ್ನು ನಗರದ ನೆಹರು ವೃತ್ತ, ಬ್ರಾಡ್‌ವೇ ರಸ್ತೆ, ಬಜಾರ್ ರಸ್ತೆ, ಅಂಗಡಿ ಬೀದಿಯಲ್ಲಿ ರಸ್ತೆಬದಿ ವ್ಯಾಪಾರಿಗಳು ಹೆಚ್ಚಾಗಿ ಕಾಣಸಿಗುತ್ತಾರೆ. ತರಕಾರಿ, ಹಣ್ಣು, ಹೂ ವ್ಯಾಪಾರ ಮಾಡಿಕೊಂಡಿರುವ ಇವರಿಗೆ ಸೂಕ್ತ ಸ್ಥಳಾವಕಾಶವಿಲ್ಲದೆ ರಸ್ತೆ, ಫುಟ್‌ಪಾತ್‌ಗಳನ್ನೇ ಆಶ್ರಯಿಸಿಕೊಂಡಿದ್ದಾರೆ. ಇವರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹುಲ್ಲಹಳ್ಳಿ ನಾಲೆ ಕವರ್‌ಡೆಕ್ಟ್ ಮೇಲೆ ಅವಕಾಶ ಮಾಡಿಕೊಡುವ ಪ್ರಯತ್ನ ಇನ್ನೂ ನನೆಗುದಿಗೆ ಬಿದ್ದಿದೆ. ಮೇಲಾಗಿ ಹುಲ್ಲಹಳ್ಳಿ ನಾಲೆ ಕವರ್‌ಡೆಕ್ಟ್ ಮೇಲೆ ವ್ಯಾಪಾರ ಮಾಡಲು ಕೂಡ ರಸ್ತೆಬದಿ ವ್ಯಾಪಾರಿಗಳೂ ಒಲವು ತೋರುತ್ತಿಲ್ಲ. ಜನಸಂದಣಿ ಹೆಚ್ಚಾಗಿರುವ ಬಜಾರ್ ರಸ್ತೆ, ನೆಹರು ವೃತ್ತವೇ ಇವರಿಗೆ ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವುದರಿಂದ ಈ ಜಾಗ ಬಿಟ್ಟು ಹೋಗಲು ಅವರೂ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಫುಟ್‌ಪಾತ್ ತೆರವು ಎಂಬುದು ನಗರಸಭೆಗೆ ಕಗ್ಗಂಟಾಗಿ ಪರಿಣಮಿಸಿದೆ.

    ಬಜಾರ್ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡು ಎಲ್ಲೆಲ್ಲಿ ಅತಿಕ್ರಮಿಸಿಕೊಳ್ಳಲಾಗಿದೆಯೋ ಅಲ್ಲೆಲ್ಲ ವರ್ತಕರು, ವ್ಯಾಪಾರಿಗಳಿಗೆ ಗಡುವು ನೀಡಿ ಸೂಚನೆ ನೀಡಲಾಗಿದೆ. ಆದಾಗ್ಯೂ ಫುಟ್‌ಪಾತ್ ತೆರವು ಮಾಡದಿದ್ದರೆ ಅತಿಕ್ರಮಿಸಿಕೊಂಡಿರುವ ಜಾಗದಲ್ಲಿ ಇಡುವ ಪದಾರ್ಥಗಳನ್ನು ಜಪ್ತಿ ಮಾಡಲಾಗುವುದು. ರಾಷ್ಟ್ರಪತಿ ರಸ್ತೆ, ಎಂಜಿಎಸ್ ರಸ್ತೆಯಲ್ಲೂ ಫುಟ್‌ಪಾತ್ ತೆರವಿಗೆ ಕ್ರಮಕೈಗೊಳ್ಳುತ್ತೇವೆ. ದೀಪಾವಳಿ ಹಬ್ಬ ಇದ್ದಿದ್ದರಿಂದ ಕಾರ್ಯಾಚರಣೆ ಕೈಗೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ತೆರವಿಗೆ ಮುಂದಾಗಲಿದ್ದೇವೆ.
    ನಂಜುಂಡಸ್ವಾಮಿ, ನಗರಸಭೆ ಪೌರಾಯುಕ್ತ

    ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆಬದಿ ವ್ಯಾಪಾರಿಗಳಿಗೆ ಹಲವಾರು ಕಾರ್ಯಕ್ರಮ ನೀಡಿದ್ದು ಗುರುತಿನ ಚೀಟಿ ನೀಡುವ ಮೂಲಕ ಭದ್ರತೆ ಒದಗಿಸಿದ್ದಾರೆ. ಬಜಾರ್ ರಸ್ತೆಯಲ್ಲಿ ರಸ್ತೆಬದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಯಕಟ್ಟಿನ ಜಾಗದಲ್ಲಿ ವ್ಯಾಪಾರ, ವಹಿವಾಟು ನಡೆಸಬೇಕು. ಮುಂದಿನ ದಿನಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ನಗರಸಭೆಯಿಂದ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
    ಮಹದೇವಪ್ರಸಾದ್ ನಗರಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts