More

    ರಸ್ತೆ ಕಾಮಗಾರಿಯಿಂದ ಸಮಸ್ಯೆ

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಆದರೆ, ಮಳೆಗಾಲ ಸಮಯದಲ್ಲಿ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡಿರುವುದರಿಂದ ಹಲವಾರು ಸಮಸ್ಯೆಗಳು ತಲೆದೋರಿವೆ.

    ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಗೇಟು ಬಳಿ ಮನೆಯಂಗಳವೇ ನೀರು ಹರಿದು ಹೋಗುವ ಚರಂಡಿಯಾಗಿ ಪರಿವರ್ತನೆಯಾದರೆ, ರಸ್ತೆ ಪಕ್ಕದ ಅಡಕೆ ತೋಟದಲ್ಲಿ ನೀರು ತುಂಬಿ ಕೃಷಿ ನಾಶವಾಗುವ ಭೀತಿ ಎದುರಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ಮನೆ ಅಂಚಿನವರೆಗೂ ಸಾಗಿದ್ದು, ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ಹುಸಿಯಾಗಿದೆ. ರಾ.ಹೆದ್ದಾರಿ ಪಕ್ಕದಲ್ಲಿರುವ ಮನೆಗಳ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಒಂದೆಡೆ ರಸ್ತೆಗಾಗಿ ತಮ್ಮ ಜಮೀನು ಕಳಕೊಂಡರೆ, ಇನ್ನೊಂದೆಡೆ ಪರಿಹಾರ ಮೊತ್ತ ಸಿಗದೆ ಸಂತ್ರಸ್ತರು ಹೈರಾಣಾಗಿದ್ದಾರೆ.

    ರಾ.ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದಾಗಿ ನಾವೂರು ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಪಕ್ಕದ ಅನೇಕ ಮನೆಗಳಿಗೆ ತೊಂದರೆಯಾಗಿದೆ. ಹಳೆಗೇಟು ಎಂಬಲ್ಲಿ ವಿಶ್ವನಾಥ ಎಂಬುವರ ಮನೆ ಅಂಗಳಕ್ಕೆ ಮಳೆ ನೀರೆಲ್ಲ ಹರಿದು ಬರುತ್ತಿದೆ. ಈ ನೀರು ಪಕ್ಕದ ಯೋಗೀಶ್ ಗೌಡ ಅವರ ತೋಟದಲ್ಲಿ ತುಂಬಿಕೊಂಡು ಅಡಕೆ ಕೃಷಿ ನಾಶವಾಗುವ ಆತಂಕ ಎದುರಾಗಿದೆ.

    ಜಯರಾಮ್ ಹಾಗೂ ಗಣೇಶ್ ಎಂಬುವರ ಮನೆ, ದನದ ಹಟ್ಟಿಗೆ ತಾಗಿಕೊಂಡೇ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆಯಂಚಿನಲ್ಲೇ ಈ ಮನೆಗಳಿದ್ದರೂ ಇವುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿಲ್ಲ. ಇದರಿಂದಾಗಿ ಮನೆಗಳು ತೆರವಾಗದೆ ಉಳಿದಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಇಂತಿಷ್ಟು ಮೀಟರ್ ದೂರದಲ್ಲಿ ವಾಸ್ತವ್ಯದ ಮನೆಗಳಿರಬೇಕು ಎನ್ನುವ ನಿಯಮವೂ ಇಲ್ಲಿ ಪಾಲನೆಯಾಗಿಲ್ಲ. ಮನೆಗೆ ತಾಗಿಕೊಂಡೇ ರಸ್ತೆ ನಿರ್ಮಾಣಗೊಂಡಿರುವುದರಿಂದ ಚರಂಡಿಯೂ ಇಲ್ಲದೆ ಮಳೆ ನೀರೆಲ್ಲಾ ಮನೆ ಅಂಚಿಗೆ ಇಂಗುತ್ತಿದೆ. ನೀರು ಹರಿದು ಹೋಗಲು ತೋಡೊಂದಕ್ಕೆ ಮೇಲ್ಭಾಗದಲ್ಲೇ ಮೋರಿ ಅಳವಡಿಸಲಾಗಿದ್ದು ನೀರೆಲ್ಲ ಖಾಸಗಿ ಜಮೀನಿನಲ್ಲಿ ತುಂಬಿಕೊಳ್ಳುತ್ತಿದೆ.

    ಪರಿಹಾರ ಸಿಕ್ಕಿಲ್ಲ: ನಾವೂರು ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 32 ಮಂದಿ ಜಮೀನು ಸಂತ್ರಸ್ತರು ಇದ್ದು, ಈ ಪೈಕಿ ಇಬ್ಬರನ್ನು ಹೊರತುಪಡಿಸಿ ಉಳಿದ ಯಾರಿಗೂ ಪರಿಹಾರ ಮೊತ್ತ ಸಿಕ್ಕಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಇಲ್ಲಿನ ಶಾಂಭವಿ ಸದಾನಂದ ಅವರ 5 ಗುಂಟೆ ಜಮಿನಿಗೆ ಪರಿಹಾರ ಕೋರಿ ಇಲಾಖೆ ಸೂಚನೆಯಂತೆ 2020ರ ಜನವರಿಯಲ್ಲಿ ದಾಖಲೆಗಳನ್ನು ಸಲ್ಲಿಸಲಾಗಿದೆ. ಒಟ್ಟು 25.58 ಲಕ್ಷ ರೂ. ಭೂ ಪರಿಹಾರ ಪಾವತಿಸುವಂತೆ ರಾ.ಹೆದ್ದಾರಿ ವಿಶೇಷ ಭೂ ಸ್ವಾಧೀನಾಧಿಕಾರಿಯವರು 2020ರ ಡಿಸೆಂಬರ್‌ನಲ್ಲಿ ಲಿಖಿತ ಸೂಚನೆ ನೀಡಿದ್ದಾರೆ. ಇವರಿಗೆ ಸೇರಿದ ಜಮೀನಿನಲ್ಲಿ ಈಗಾಗಲೇ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಪರಿಹಾರ ಮೊತ್ತ ಮಾತ್ರ ಕೈ ಸೇರಿಲ್ಲ.

    ಜಮೀನಿಗೆ ಬೇಲಿ: ರಸ್ತೆ ಅಭಿವೃದ್ಧಿಗಾಗಿ ತಮ್ಮ ಜಮೀನನ್ನು ನೀಡಿದ ತಪ್ಪಿಗಾಗಿ ಈಗ ಜಮೀನೂ ಇಲ್ಲ, ಪರಿಹಾರವೂ ಇಲ್ಲ ಎನ್ನುವ ಆತಂಕ ನಾವೂರು ಗ್ರಾಮದ ಸಂತ್ರಸ್ತರನ್ನು ಕಾಡಲಾರಂಭಿಸಿದೆ. ಮುಂದಿನ ಎರಡು ವಾರದೊಳಗಾಗಿ ಸಂಬಂಧಪಟ್ಟ ಇಲಾಖೆ ಜಮೀನು ಕಳಕೊಂಡ ಎಲ್ಲ ಭೂ ಮಾಲೀಕರಿಗೆ ಪರಿಹಾರ ನೀಡಬೇಕು. ತಪ್ಪಿದ್ದಲ್ಲಿ ಈಗಾಗಲೇ ರಸ್ತೆ ನಿರ್ಮಾಣಗೊಂಡಿರುವ ತಮ್ಮ ಜಮೀನಿಗೆ ಬೇಲಿ ಹಾಕುವುದಾಗಿ ಸ್ಥಳೀಯ ಸಂತ್ರಸ್ತ ಭೂ ಮಾಲೀಕರು ಎಚ್ಚರಿಸಿದ್ದಾರೆ. ಪರಿಹಾರ ಇಂದು ಸಿಗಬಹುದು, ನಾಳೆ ಸಿಗಬಹುದು ಎಂದು ಕಾದದ್ದೇ ಬಂತು. ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಮುಂದಿನ ಎರಡು ವಾರದೊಳಗಾಗಿ ಪರಿಹಾರ ಮೊತ್ತ ಪಾವತಿಸದೇ ಇದ್ದಲ್ಲಿ ಜಮೀನು ನೀಡಿದ ಮಾಲೀಕರು ತಮ್ಮ ಜಮೀನುಗಳಿಗೆ ಬೇಲಿ ಹಾಕಿ ಪ್ರತಿಭಟಿಸಲಿದ್ದಾರೆ ಎಂದು ಸಂತ್ರಸ್ತ ಸದಾನಂದ ಗೌಡ ಹಳೆಗೇಟು ತಿಳಿಸಿದ್ದಾರೆ.

    ಭೂ ಸ್ವಾಧೀನಾಧಿಕಾರಿ ಅನಾರೋಗ್ಯದಿಂದಾಗಿ ಸಂತ್ರಸ್ತ ಭೂ ಮಾಲೀಕರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಎರಡೂ ಕಟ್ಟಡ ಹೊರತುಪಡಿಸಿ ಉಳಿದ ಯಾರಿಗೂ ಪರಿಹಾರ ಮೊತ್ತ ಈವರೆಗೆ ನೀಡಿಲ್ಲ. ಭೂಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಆದಷ್ಟು ಶೀಘ್ರ ಪರಿಹಾರ ನೀಡುತ್ತೇವೆ.
    – ಕೃಷ್ಣಕುಮಾರ್, ಸಹಾಯಕ ಕಾರ್ಯಪಾಲ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts