More

    ಖಾಸಗಿ ಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿ ಸಂಬಳಕ್ಕೆ ಕತ್ತರಿ!

    ತುಮಕೂರು: ಖಾಸಗಿ ಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿ ಕರೊನಾ ಸಂಕಷ್ಟದ ಸುಳಿಗೆ ಸಿಲುಕಿದ್ದು, ಶಾಲೆ ಪುನರಾರಂಭವಾಗದ ಹೊರತು 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಸಂಬಳಕ್ಕೆ ಕತ್ತರಿ ಬೀಳಲಿದೆ.

    ಆನ್‌ಲೈನ್ ಶಾಲೆ ನೆಪವೊಡ್ಡಿ ಪಾಲಕರಿಂದ ಶುಲ್ಕ ವಸೂಲಿ ಮಾಡಿರುವ ಶಾಲೆಗಳು ಶೇ.30 ವೇತನ ನೀಡಿ ಕೈತೊಳೆದುಕೊಂಡಿದ್ದು, ಅನುದಾನರಹಿತ ಶಾಲೆ ಸಿಬ್ಬಂದಿ ಗೋಳು ಕೇಳುವವರೇ ಇಲ್ಲವಾಗಿದೆ. ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳು ಎಲ್ಲ ಕೆಲಸಗಳು ಸ್ತಬ್ಧಗೊಂಡಿದ್ದವು. ಕರೊನಾ ಬೆದರು ಬೊಂಬೆ ಮುಂದಿಟ್ಟುಕೊಂಡು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸಹ ಶಿಕ್ಷಕರ ಜೇಬಿಗೆ ಕತ್ತರಿ ಹಾಕಿವೆ. ತಿಂಗಳ ಸಂಬಳವನ್ನೇ ನೆಚ್ಚಿಕೊಂಡಿದ್ದ ಕುಟುಂಬಗಳೀಗ ‘ಸಂಸಾರ’ ದೂಗಿಸುವುದೇ ಸವಾಲಾಗಿದೆ.

    360 ಅನುದಾನರಹಿತ ಶಾಲೆಗಳು: ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಕ್ರಮವಾಗಿ 256 ಹಾಗೂ 104 ಅನುದಾನರಹಿತ ಶಾಲೆಗಳಿವೆ. ಈ ಶಾಲೆಗಳು ಆರ್‌ಟಿಇ ವ್ಯಾಪ್ತಿಗೆ ಒಳಪಟ್ಟಿವೆ. 6 ಸಾವಿರಕ್ಕೂ ಹೆಚ್ಚು ಶಿಕ್ಷಕರು, ಶಾಲಾ ವಾಹನ ಚಾಲಕರು, ಕ್ಲೀನರ್‌ಗಳು, ಆಯಾಗಳು ಸೇರಿ 4 ಸಾವಿರಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿ ದುಡಿಯುತ್ತಿದ್ದು ಎರಡು ತಿಂಗಳ ಸಂಬಳವನ್ನು ಕರೊನಾ ನೆಪವೊಡ್ಡಿ ಕಬಳಿಸಲಾಗಿದೆ. ಈ ಬಗ್ಗೆ ಆಡಳಿತ ಮಂಡಳಿ ವಿರುದ್ಧ ಯಾರೂ ಧ್ವನಿಎತ್ತುವಂತಿಲ್ಲ.

    ಸಂಬಳ ಕೇಳಿದರೆ ಕೆಲಸಕ್ಕೆ ಕುತ್ತು: ಆನ್‌ಲೈನ್ ಶಾಲೆ ನೆಪ ಇಟ್ಟುಕೊಂಡು ಶಿಕ್ಷಕರನ್ನೇ ಬಳಸಿಕೊಂಡು ಬಹುತೇಕ ಶಾಲೆಗಳು ಮೊದಲ ಕಂತಿನ ಶುಲ್ಕ ವಸೂಲಿ ಮಾಡಿವೆ ಎನ್ನಲಾಗಿದೆ. ಆದರೂ, ಪ್ರತಿಷ್ಠಿತ ಶಾಲೆಗಳೇ ಶಿಕ್ಷಕರಿಗೆ ಪೂರ್ತಿ ಸಂಬಳ ಕೊಡದೆ ಸತಾಯಿಸುತ್ತಿವೆ. ಏನಾದರೂ ಉಸಿರುಬಿಟ್ಟರೆ ಕೆಲಸಕ್ಕೆ ಕುತ್ತು ಬರಲಿದೆ ಎಂಬ ಬೆದರಿಕೆಯನ್ನು ಕೆಲ ಆಡಳಿತ ಮಂಡಳಿಗಳು ಹಾಕಿವೆ

    ಶಾಲಾ ಪ್ರವೇಶಾತಿ ಇಲ್ಲ, ಶಾಲೆ ಪುನರಾರಂಭವಾಗುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ 20-25 ವರ್ಷ ಜೀತದಾಳುಗಳಂತೆ ದುಡಿಯುತ್ತಿರುವ ಹಿರಿಯ ಶಿಕ್ಷಕರನ್ನು ಮುಲಾಜಿಲ್ಲದೆ ಒಂದೆಡೆ ಆಡಳಿತ ಮಂಡಳಿಗಳು ಬಿಡುಗಡೆ ಮಾಡುತ್ತಿವೆ. ಹತ್ತಾರು ವರ್ಷಗಳಿಂದ ಲಾಭ ಮಾಡಿಕೊಂಡಿರುವ ಆಡಳಿತ ಮಂಡಳಿಗಳು ಸಂಕಷ್ಟ ಸಂದರ್ಭದಲ್ಲಾದರೂ ಶಿಕ್ಷಕರು, ಸಿಬ್ಬಂದಿ ಕೈಹಿಡಿಯಬೇಕು. ಶಿಕ್ಷಣ ಸಚಿವರು ಮಧ್ಯಪ್ರವೇಶಿಸಿ ಸಂಕಷ್ಟಕ್ಕೆ ಸ್ಪಂದಿಸಬೇಕೆಂಬುದು ನೊಂದ ಶಿಕ್ಷಕರ ಆಗ್ರಹವಾಗಿದೆ.

    ಖಾಸಗಿ ಶಾಲಾ ಸಿಬ್ಬಂದಿ ಮನವಿ ನೀಡಿದರೆ ಸರ್ಕಾರದ ಗಮನಕ್ಕೆ ತರಲಾಗುವುದು. ನನ್ನ ಹಂತದಲ್ಲಿ ಅವರಿಗೆ ಸಹಾಯ ಮಾಡಲಾಗುವುದಿಲ್ಲ. ಆದರೂ, ಮಾನವೀಯತೆ ದೃಷ್ಟಿಯಿಂದ ನೆರವು ನೀಡಲು ಕ್ರಮವಹಿಸಲಾಗುವುದು. ಡಿಡಿಪಿಐಗಳ ಮುಖಾಂತರ ಖಾಸಗಿ ಶಾಲಾ ಸಿಬ್ಬಂದಿ ದೂರು ಆಲಿಸಲು ಸೂಚನೆ ನೀಡುತ್ತೇನೆ.
    ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ

    ತುಮಕೂರು ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 256 ಶಾಲೆಗಳಿಗೆ 20 ಕೋಟಿ ರೂ.,ನಷ್ಟು ಆರ್‌ಟಿಇ ಅನುದಾನ ಬರಬೇಕಿದೆ. ಶಾಲೆಗಳು ಪುನರಾರಂಭವಾಗದೆ ಮಕ್ಕಳಿಂದ ಶುಲ್ಕ ವಸೂಲಿ ಮಾಡಲು ಸಾಧ್ಯವಿಲ್ಲ. ನಮ್ಮ ಸಿಬ್ಬಂದಿಗೆ ಸಾಲ ಮಾಡಿ ಸಂಬಳ ಕೊಡಬೇಕಿದೆ. ಸಂಬಳ ಕೊಡಲು ಸರ್ಕಾರ ಬಡ್ಡಿರಹಿತ ಸಾಲವನ್ನಾದರೂ ಕೊಡಲಿ ಅಥವಾ ನಮ್ಮ ಶಿಕ್ಷಕರಿಗೆ, ಸಿಬ್ಬಂದಿಗೆ ಆರ್ಥಿಕ ನೆರವಾದರೂ ಕೊಡಲಿ.
    ಹಾಲನೂರು ಎಸ್.ಲೇಪಾಕ್ಷ ಅಧ್ಯಕ್ಷ, ತುಮಕೂರು ಶೈಕ್ಷಣಿಕ ಜಿಲ್ಲಾ ಅನುದಾನರಹಿತ ಶಾಲಾ ಮಂಡಳಿಗಳ ಒಕ್ಕೂಟ

    ನಮಗೆ ದಿಕ್ಕು ತೋಚುತ್ತಿಲ್ಲ. ಕಳೆದ ವರ್ಷದ್ದೇ ಕೊನೇ ಕಂತಿನ ಶುಲ್ಕ ಬಾಕಿ ಬರಬೇಕಿದೆ. ಶಾಲೆ ಆರಂಭವಾಗದೆ ಶುಲ್ಕ ವಸೂಲಿ ಕಷ್ಟ. ಶಾಲಾ ಕಟ್ಟಡ ಬಾಡಿಗೆ ಕಟ್ಟಬೇಕು, ಸಿಬ್ಬಂದಿಗೆ ಸಂಬಳ ಕೊಡಬೇಕು. ಎಲ್ಲದಕ್ಕೂ ಸಾಲ ಮಾಡಬೇಕಿದೆ. ಶಾಲಾ ವಾಹನಗಳ ವಿಮೆ, ರಸ್ತೆ ತೆರಿಗೆ (ರೋಡ್ ಟ್ಯಾಕ್ಸ್) ಕಟ್ಟಬೇಕು.
    ಭಾಸ್ಕರ್ ರೆಡ್ಡಿ ಅಧ್ಯಕ್ಷ, ಮಧುಗಿರಿ ಶೈಕ್ಷಣಿಕ ಜಿಲ್ಲಾ ಅನುದಾನ ರಹಿತ ಶಾಲಾ ಮಂಡಳಿಗಳ ಒಕ್ಕೂಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts