More

    ಖಾಸಗಿ ಆಸ್ಪತ್ರೆಗಳಲ್ಲೂ ಸಿದ್ಧತೆ, ಮುಖ್ಯಸ್ಥರಿಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

    ಉಡುಪಿ: ಜಿಲ್ಲೆಯಲ್ಲಿ ಅಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೋವಿಡ್-19 ಚಿಕಿತ್ಸೆ ನೀಡಲು 19 ಆಸ್ಪತ್ರೆಗಳು ನೋಂದಾಯಿಸಿದ್ದು, ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ನೋಂದಾಯಿತ ಕೋವಿಡ್-19 ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಬೆಡ್‌ಗಳನ್ನು ಮೀಸಲಿಡಬೇಕು. ಅಗತ್ಯ ಉಪಕರಣ ಅಳವಡಿಸಿಕೊಳ್ಳಬೇಕು. ಯಾವುದೇ ಸಂದರ್ಭ ರೋಗಿಗಳನ್ನು ದಾಖಲಿಸಿದರೂ ಉತ್ತಮ ಚಿಕಿತ್ಸೆ ನೀಡಲು ಸಿದ್ಧವಾಗಿರಬೇಕು. ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಎಚ್ಚರಿಸಿದರು.

    ಸೌಲಭ್ಯಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು. ಸಮಿತಿ ಆಸ್ಪತೆಗಳಿಗೆ ಭೇಟಿ ನೀಡಿ, ಸಲಹೆ ಸೂಚನೆ ನೀಡಿ, ವರದಿ ನೀಡಲಿದೆ. ಎಲ್ಲ ಖಾಸಗಿ ಆಸ್ಪತ್ರೆಗಳು ಜ್ವರ ಪರೀಕ್ಷಾ ಕೇಂದ್ರ ಮತ್ತು ಐಸೋಲೇಷನ್ ಕೇಂದ್ರಗಳನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಟೆಕ್ನೀಶಿಯನ್ ಸೋಂಕು ಮೂಲ ಪತ್ತೆ
    ಉಡುಪಿ: ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸಿಟಿವ್ ಕಂಡುಬಂದ ಲ್ಯಾಬ್ ಟೆಕ್ನೀಶಿಯನ್ ಮಹಿಳೆ ಸಂಪರ್ಕ ಹಿನ್ನೆಲೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ನಂತರ ವಿಚಾರಣೆಯಲ್ಲಿ ಅವರು ಮುಂಬೈಯಿಂದ ಬಂದವರ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂತು. ಆಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಮನೆ ಭೇಟಿಯಲ್ಲಿ ಪ್ರಥಮ ಸ್ಥಾನ: ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಿರ್ವಹಣೆ ಅಸಾಧ್ಯವಾಗುವುದರಿಂದ ವಿಶೇಷವಾಗಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಿಂದ ಬಂದವರಿಗೆ ಹೋಂ ಕ್ವಾರಂಟೈನ್ ವಿಧಿಸಲು ಸರ್ಕಾರ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿದೆ. ಅಧಿಕಾರಿಗಳು ಶೇ.91ರಷ್ಟು ಹೋಮ್ ಕ್ವಾರಂಟೈನ್ ವಿಧಿಸಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯದಲ್ಲೇ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಕಲಬುರಗಿ 2ನೇ ಸ್ಥಾನದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts