More

    ಖಾಸಗಿ ವೈದ್ಯರು ಆಸ್ಪತ್ರೆ ಮುಚ್ಚುವಂತಿಲ್ಲ, ತುರ್ತು ಸೇವೆಗೆ ಸಿದ್ಧರಾಗಲಿ: ಶಾಸಕ ವೆಂಕಟರಾವ ನಾಡಗೌಡ ತಾಕೀತು

    ಸಿಂಧನೂರು: ಖಾಸಗಿ ವೈದ್ಯರು ತಮ್ಮ ಆಸ್ಪತ್ರೆ ಮುಚ್ಚುವಂತಿಲ್ಲ, ತುರ್ತು ಸೇವೆಗೆ ಸದಾ ಸಿದ್ಧರಿರಬೇಕು ಎಂದು ವೈದ್ಯರಿಗೆ ಶಾಸಕ ವೆಂಕಟರಾವ ನಾಡಗೌಡ ಖಡಕ್ ಎಚ್ಚರಿಕೆ ನೀಡಿದರು. ನಗರದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಕಂದಾಯ, ನಗರಸಭೆ, ಆರೋಗ್ಯ, ಪಂಚಾಯತ್ ರಾಜ್ಯ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣ ಬಂದ್ ಮಾಡಿರುವ ದೂರುಗಳಿದ್ದು, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರ ಸೇವೆ ಅಗತ್ಯವಾಗಿದೆ. ಅದರಲ್ಲೂ ವೈದ್ಯರ ಸೇವೆ ಅತ್ಯಗತ್ಯವಾಗಿದೆ ಎಂದರು.

    ಆಸ್ಪತ್ರೆಗಳನ್ನು ಬಂದ್ ಮಾಡದೆ, ತುರ್ತು ಸೇವೆ ನೀಡಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಬಸನಗೌಡರಿಗೆ ದೂರವಾಣಿ ಮೂಲಕ ಮನವಿ ಮಾಡಿದರು. ಕರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ 21 ದಿನಗಳ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅನಗತ್ಯವಾಗಿ ಸಾರ್ವಜನಿಕರು ಓಡಾಡದೆೆ ಪೊಲೀಸ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಬೆಂಗಳೂರು, ಪೂನಾ, ಮುಂಬೈ ಸೇರಿ ಇತರ ಮಹಾನಗರಗಳಿಗೆ ಗುಳೆ ಹೋಗಿ ಮರಳಿ ಬಂದವರ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ತಿಳಿಸಿದರು.

    ತಹಸೀಲ್ದಾರ ಮಂಜುನಾಥ ಭೋಗಾವತಿ ಇಲ್ಲಿಯವರೆಗೆ ತಾಲೂಕು ಆಡಳಿತದಿಂದ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಡಿವೈಎಸ್‌ಪಿ ವಿಶ್ವನಾಥ ಕುಲ್ಕರ್ಣಿ, ಸಿಪಿಐ ಬಾಲಚಂದ್ರ ಲಕ್ಕಂ, ಪಿಡಬ್ಲ್ಯುಡಿ ಎಇಇ ಸಿ.ಎಸ್.ಪೊಲೀಸ್ ಪಾಟೀಲ್, ಪಿಎಸ್‌ಐಗಳಾದ ವಿಜಯಕೃಷ್ಣ, ರಾಘವೇಂದ್ರ, ಮುಖ್ಯ ವೈದ್ಯಾಧಿಕಾರಿ ನಾಗರಾಜ ಕಾಟ್ವಾ, ತಾಲೂಕು ಪ್ರಭಾರ ವೈದ್ಯಾಧಿಕಾರಿ ಜೀವನೇಶ್ವರ, ಜೆಸ್ಕಾಂ ಎಇಇ ದೌವಲಸಾಬ್, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts