More

    ನಾಳೆಯಿಂದ ಖಾಸಗಿ ಬಸ್ ಸಂಚಾರ, ಟಿಕೆಟ್ ದರ ಶೇ.20 ಏರಿಕೆ

    ಮಂಗಳೂರು; ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಬಸ್‌ಗಳ ಸೇವೆ ಗುರುವಾರ ಸೀಮಿತ ಸಂಖ್ಯೆಯಲ್ಲಿ ಮತ್ತೆ ರಸ್ತೆಗಿಳಿಯಲಿವೆ. ಬಸ್‌ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ. ಡೀಸೆಲ್, ಆಯಿಲ್ ದರ ಹೆಚ್ಚಳ ಕಾರಣ ಪ್ರಯಾಣ ದರದಲ್ಲಿ ಶೇ.20ರಷ್ಟು ಹೆಚ್ಚಳ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಸಿಟಿ ಬಸ್‌ಗಳ ಸಂಚಾರ ಇಲ್ಲದೆ ಜನರ ಓಡಾಟ ಕಷ್ಟವಾಗಿತ್ತು. ಮಂಗಳವಾರ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅಧ್ಯಕ್ಷತೆಯ ಸಭೆಯಲ್ಲಿ ಬಸ್ ಮಾಲೀಕರು ಜು.1ರಿಂದ ಬಸ್ ಸೇವೆ ಒದಗಿಸಲು ನಿರ್ಧರಿಸಿದ್ದಾರೆ.

    ಸಮ್ಮತಿ ಸೂಚಿಸಿದ ಬಸ್ ಮಾಲೀಕರು: ಇನ್ನು ಮುಂದೆ ಸಿಟಿ ಬಸ್‌ಗಳು ಹ್ಯಾಮಿಲ್ಟನ್ ವೃತ್ತದಿಂದ ರಾವ್ ಆ್ಯಂಡ್ ರಾವ್ ವೃತ್ತ ರಸ್ತೆಯಲ್ಲಿ ನಿಲ್ಲುವುದಿಲ್ಲ. ಬದಲಾಗಿ ಎಲ್ಲ ಸಿಟಿ ಬಸ್‌ಗಳು ಸರ್ವಿಸ್ ಬಸ್ ನಿಲ್ದಾಣಕ್ಕೆ ಬಂದು ನಿಲ್ಲಲಿವೆ. ಸ್ಟೇಟ್‌ಬ್ಯಾಂಕ್ ಬಳಿ ಸಿಟಿ ಬಸ್ ನಿಲ್ಲಿಸುವುದರಿಂದ ಈ ಭಾಗದಲ್ಲಿ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಎಂಬ ದೂರು ಬಂದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಸ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಸಿಟಿ ಬಸ್, ಸರ್ವಿಸ್ ಬಸ್ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳು ಒಂದೇ ನಿಲ್ದಾಣದಲ್ಲಿ ನಿಲ್ಲಲಿವೆ. ಸಿಟಿ ಬಸ್‌ಗಳನ್ನು ಸರ್ವಿಸ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ಒಪ್ಪಿದ್ದೇವೆ ಎಂದು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಇಲ್ಲಿನ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಾಕಷ್ಟು ಜಾಗವಿದೆ. ಸಂಜೆ ಅಥವಾ ರಾತ್ರಿ ವೇಳೆ ದೂರದ ಊರುಗಳಿಗೆ ಹೊರಡುವ ಕೆಲವು ಬಸ್‌ಗಳನ್ನು ದಿನವಿಡೀ ಪಾರ್ಕಿಂಗ್ ಮಾಡಲಾಗುತ್ತಿದೆ. ಆ ಬಸ್ ಹೊರಡುವ ಅರ್ಧ ಗಂಟೆ ಮುನ್ನ ಬಸ್ ನಿಲ್ದಾಣಕ್ಕೆ ಬರುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಲ್ಲಿರುವ ಟೆಂಪೋಗಳನ್ನು ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

    ಶೇ.20ರಷ್ಟು ದರ ಏರಿಕೆ: ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್ ಹಾಗೂ ಸರ್ವಿಸ್ ಬಸ್ ದರವನ್ನು ಷರತ್ತುಬದ್ಧವಾಗಿ ಶೇ.20ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಕೋವಿಡ್ ಕಾರಣದಿಂದಾಗಿ ಶೇ.50 ಆಸನ ಸಾಮರ್ಥ್ಯದಲ್ಲಿ ಬಸ್ ಸಂಚರಿಸಬೇಕಾಗಿದ್ದು, ಈಗಿನ ಡಿಸೇಲ್ ದರದಲ್ಲಿ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ಬಸ್ ಮಾಲೀಕರು ಮನವಿ ಮಾಡಿದ್ದರು. ಆ ಕಾರಣಕ್ಕೆ ಸದ್ಯಕ್ಕೆ ಬಸ್ ಟಿಕೆಟ್ ದರ ಸ್ಟೇಜ್‌ಗೆ ಶೇ.20ರಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಸದ್ಯ 10 ರೂ. ಇದ್ದ ಮೊದಲ ಸ್ಟೇಜ್ ದರ 12 ರೂ.ಆಗಲಿದೆ ಎಂದಿದ್ದಾರೆ.

    ನಗರ ಸಿಟಿ ಬಸ್ ಪರಿಷ್ಕೃತ ಪ್ರಯಾಣ ದರ
    ದೂರ ಕಿ.ಮೀ. ಹಿಂದಿನ ದರ ಪರಿಷ್ಕೃತ ದರ
    0.1-2.0 10 ರೂ. 12 ರೂ.
    2.1-4.0 10 ರೂ. 13 ರೂ.
    4.1-6.0 12 ರೂ. 15 ರೂ.
    6.1-8.0 13 ರೂ. 16 ರೂ.
    8.1-10.0 14 ರೂ. 18 ರೂ.
    10.1-12.0 15 ರೂ. 19 ರೂ.
    12.1-14.0 16 ರೂ. 20 ರೂ.
    14.1-16.0 17 ರೂ. 21 ರೂ.
    16.1-18.0 17 ರೂ. 22 ರೂ.
    18.1-20.0 18 ರೂ. 23 ರೂ.
    20.1-22.0 20 ರೂ. 25 ರೂ.
    22.1-24.0 21 ರೂ. 26 ರೂ.
    24.1-26.0 22 ರೂ. 28 ರೂ.
    26.1-28.0 23 ರೂ. 29 ರೂ.
    28.1-30.0 24 ರೂ. 30 ರೂ.

    ಸರ್ವಿಸ್ ಬಸ್ ಪರಿಷ್ಕೃತ ಪ್ರಯಾಣ ದರ ರೂ.ಗಳಲ್ಲಿ:
    ರೂಟ್ ಉಡುಪಿ ಕಾಪು ಉಚ್ಚಿಲ ಪಡುಬಿದ್ರಿ ಮೂಲ್ಕಿ ಕೊಳ್ನಾಡ್ ಕೆಆರ್‌ಇಸಿ ಸುರತ್ಕಲ್ ಮಂಗಳೂರು
    ಮಣಿಪಾಲ 15 33 36 47 58 60 76 76 100
    30 34 40 54 56 70 70 95
    ಕಾಪು 15 27 36 38 54 54 70
    ಉಚ್ಚಿಲ 15 30 32 47 47 64
    ಪಡುಬಿದ್ರೆ 15 22 39 39 58
    ಮೂಲ್ಕಿ 15 27 27 50
    ಕೊಳ್ನಾಡ್ 22 26 50
    ಕೆಆರ್‌ಇಸಿ 15 40
    ಸುರತ್ಕಲ್ 30

    ತೆರಿಗೆ ವಿನಾಯಿತಿ ಸಹಿತ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಅದನ್ನು ಈಡೇರಿಸಬೇಕು. ಪ್ರಯಾಣಿಕರು ನಮ್ಮೊಂದಿಗೆ ಸಹಕರಿಸಬೇಕು.
    ದಿಲ್‌ರಾಜ್ ಆಳ್ವ
    ಅಧ್ಯಕ್ಷ, ಸಿಟಿ ಬಸ್ ಮಾಲೀಕರ ಸಂಘ

    ಸರ್ವಿಸ್ ಬಸ್‌ಗಳನ್ನು ಹಂತ ಹಂತವಾಗಿ ಜುಲೈ 1ರಿಂದ ಆರಂಭಿಸಲಿದ್ದೇವೆ. ಪ್ರಯಾಣ ದರ ಶೇ.20ರಷ್ಟು ಏರಿಕೆ ಮಾಡಿದರೂ ಬಸ್‌ಗೆ ದಿನಕ್ಕೆ 2 ಸಾವಿರ ರೂ.ಖರ್ಚಾಗುತ್ತದೆ. ಶೇ.50ರಷ್ಟು ಪ್ರಯಾಣಿಕರನ್ನು ಕರೆದೊಯ್ಯಬೇಕು ಎನ್ನುವ ಷರತ್ತು ಇದೆ. ಇದರಲ್ಲಿ ಬಸ್ ನಿರ್ವಹಣೆ ಕಷ್ಟ. ಆದರೂ ಜನರಿಗಾಗಿ ಸೇವೆ ಆರಂಭಿಸುತ್ತೇವೆ.

    ರಾಜವರ್ಮ ಬಳ್ಳಾಲ್
    ಅಧ್ಯಕ್ಷ, ಕೆನರಾ ಬಸ್ ಮಾಲೀಕರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts