More

    ಖಾಸಗಿ ಬಸ್ ಮಾಲೀಕರಿಗೆ ಕರೊನಾಘಾತ!

    ತುಮಕೂರು: ಕರೊನಾ ವೈರಸ್ ಭೀತಿಯಿಂದ ನಲುಗಿರುವ ಖಾಸಗಿ ಬಸ್ ಉದ್ಯಮ ಸಂಕಷ್ಟಕ್ಕೆ ಗುರಿಯಾಗಿದೆ. ಮಾ.22ರಿಂದಲೇ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ಈ ಉದ್ಯಮವನ್ನೇ ನಂಬಿಕೊಂಡು ಬದುಕುತ್ತಿರುವ ಸಾವಿರಾರು ಮಂದಿ ಬದುಕು ಈಗ ದುಸ್ತರವೆನಿಸಿದೆ.

    ಇಡೀ ರಾಜ್ಯದಲ್ಲಿ ಸುಮಾರು 6500 ಸಾವಿರ ಖಾಸಗಿ ಬಸ್‌ಗಳು (ಮಜಲು ವಾಹನ) ಓಡಾಡುತ್ತಿದ್ದು, ಖಾಸಗಿ ಬಸ್‌ಗಳು ಪ್ರತೀ 3 ತಿಂಗಳಿಗೊಮ್ಮೆ 300 ಕೋಟಿ ರೂ.,ಗಳನ್ನು ರಸ್ತೆ ತೆರಿಗೆ (ರೋಡ್ ಟ್ಯಾಕ್ಸ್ ) ಪಾವತಿಸಬೇಕಿದೆ. ಆದರೆ, ಕರೊನಾಘಾತದಿಂದಾಗಿ ಕಳೆದೊಂದು ವಾರದಿಂದ ಬಸ್‌ಗಳು ರಸ್ತೆಗಿಳಿದಿಲ್ಲ. ಹಾಗಾಗಿ, ಈ ಬಾರಿ ರಸ್ತೆ ತೆರಿಗೆ ಪಾವತಿಸಲು ಸಾಧ್ಯವಾಗದೆ ಮಾಲೀಕರು ಮತ್ತಷ್ಟು ಸಾಲದ ಹೊರೆಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯಲ್ಲಿ 285 ಖಾಸಗಿ ಬಸ್: ಜಿಲ್ಲೆಯಲ್ಲಿ 285 ಬಸ್‌ಗಳು ಓಡಾಡಲಿದ್ದು ಮಾಲೀಕರು ಕಳೆದೊಂದು ವಾರದಿಂದ ಕಲೆಕ್ಷನ್ ಇಲ್ಲದೇ ಈಗ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಪ್ರತೀ 3 ತಿಂಗಳಿಗೊಮ್ಮೆ 35 ಸಾವಿರ ರೂಪಾಯಿ ರೋಡ್ ಟ್ಯಾಕ್ಸ್ ಜತೆಗೆ ವಾರ್ಷಿಕ 75 ಸಾವಿರ ಇನ್ಶೂರೆನ್ಸ್ ಪಾವತಿಸುವ ಖಾಸಗಿ ಬಸ್ ಮಾಲೀಕರು ವಿವಿಧ ಬ್ಯಾಂಕ್, ಸಹಕಾರಿ ಸಂಸ್ಥೆಗಳಲ್ಲಿ ಸಾಲದ ಕಂತು ಕೂಡ ಪಾವತಿಸುತ್ತಿದ್ದಾರೆ.

    ಸಾವಿರ ಕಾರ್ಮಿಕರು: ಖಾಸಗಿ ಬಸ್‌ಗಳನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳಿವೆ. ಬಸ್ ಸಂಚಾರ ಸ್ಥಗಿತಗೊಂಡಿದ್ದರೂ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳಿಗೆ ಸಂಬಳ ಕೊಡಬೇಕಾಗಿದೆ. ಇಷ್ಟೆಲ್ಲಾ ಹೊರೆ, ಹೊಡೆತಗಳಿಗೆ ಸಿಲುಕಿರುವುದರಿಂದ ಈ ಬಾರಿ ರಸ್ತೆ ತೆರಿಗೆ ರದ್ದುಪಡಿಸುವಂತೆ ಸರ್ಕಾರವನ್ನು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಎಸ್.ಬಲಶ್ಯಾಂಸಿಂಗ್ ಮನವಿ ಮಾಡಿಕೊಂಡಿದ್ದಾರೆ.

    ಸಾಲದ ಕಂತುಗಳಿಗೆ ವಿನಾಯಿತಿ ದೊರೆತಿರುವುದು ಸಮಾಧಾನದ ನಿಟ್ಟುಸಿರು ತಂದಿದ್ದರು. ಈಗ ರಸ್ತೆ ತೆರಿಗೆ ಪಾವತಿಸಲೇಬೇಕಾದ ಸಂಕಷ್ಟಕ್ಕೆ ಖಾಸಗಿ ಬಸ್ ಮಾಲೀಕರು ಸಿಲುಕಿದ್ದಾರೆ. ಎಲ್ಲರನ್ನೂ ಕೈಹಿಡಿದಿರುವ ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತಿರುವ ಸಿಎಂ ಯಡಿಯೂರಪ್ಪ ಅವರು ಖಾಸಗಿ ಬಸ್ ಮಾಲೀಕರು ಕೂಗಿಗೆ ಸ್ಪಂದಿಸುತ್ತಾರಾ ಕಾದು ನೋಡಬೇಕಿದೆ.

    ಸಾರಿಗೆ ಉದ್ಯಮವನ್ನಾಗಿ ಪರಿಗಣಿಸಿದ್ದು, ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ನಮ್ಮ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಇಡೀ ರಾಜ್ಯದಾದ್ಯಂತ ಪ್ರತೀ 3 ತಿಂಗಳಿಗೊಮ್ಮೆ 300 ಕೋಟಿ ರೂ., ರಸ್ತೆ ತೆರಿಗೆ ಪಾವತಿಸಿದ್ದು ಈ ಬಾರಿ ಕರೊನಾ ಸಂಕಷ್ಟದಿಂದಾಗಿ ರೋಡ್ ಟ್ಯಾಕ್ಸ್ ನಿಂದ ಮುಕ್ತಿ ನೀಡಬೇಕು. ಇನ್ನೂ ಎಷ್ಟು ದಿನ ಇದೇ ಪರಿಸ್ಥಿತಿ ಇರುತ್ತೊ ಗೊತ್ತಿಲ್ಲ.
    ಬಿ.ಎಸ್.ಬಲಶ್ಯಾಂಸಿಂಗ್
    ಅಧ್ಯಕ್ಷರು, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ, ತುಮಕೂರು

    ಹಳ್ಳಿಹಳ್ಳಿಗೂ ಬಸ್ ಓಡಿಸುತ್ತೇವೆ. ಇದನ್ನು ಸೇವೆಯೆಂದೇ ಪರಿಗಣಿಸಿದ್ದು, ಜೀವನಕ್ಕಾಗುವಷ್ಟು ದುಡಿಮೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮನ್ನೇ ಸಾವಿರಾರು ಕುಟುಂಬಗಳು ನೆಚ್ಚಿಕೊಂಡಿವೆ. ಇಂತಹ ಪರಿಸ್ಥಿತಿ ಹಿಂದೆಂದು ಬಂದಿರಲಿಲ್ಲ. ಸರ್ಕಾರ ನಮ್ಮ ಕೈಹಿಡಿದರೆ ನಾವು ಸ್ವಲ್ಪ ಉಸಿರಾಡಬಹುದು.
    ಪಿ.ಎನ್.ನರಸಿಂಹಮೂರ್ತಿ ಮಾಲೀಕರು, ವಿಜಯಲಕ್ಷ್ಮೀ ಬಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts